ಹುಬ್ಬಳ್ಳಿ: ಬಿಜೆಪಿ ಜತೆಗಿನ ಸುದೀರ್ಘ ನಂಟು ಕಡಿದುಕೊಂಡು ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪರವಾಗಿ ಪ್ರಚಾರ ನಡೆಸಿದ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ವಿರುದ್ಧ AIAIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಾಪ್ರಹಾರ ನಡೆಸಿದರು.
ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಎಐಎಂಐಎಂ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಪರ ನೇಕಾರನಗರದ ಬಳಿ ನೂರಾನಿ ಪ್ಲಾಟ್ನಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. RSSನಿಂದ ಬಂದ ವ್ಯಕ್ತಿ ಎಂದು ಜಗದೀಶ್ ಶೆಟ್ಟರ್ ಅವರನ್ನು ಕರೆದ ಓವೈಸಿ, ಸೋನಿಯಾ ಗಾಂಧಿ ಅವರು RSS ವ್ಯಕ್ತಿ ಪರ ಪ್ರಚಾರ ಮಾಡುತ್ತಾರೆ ಎಂಬುದನ್ನು ತಾವು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು.
“ಮೇಡಂ ಸೋನಿಯಾಜಿ,RSS ವ್ಯಕ್ತಿ ಪರ ನೀವು ಪ್ರಚಾರ ಮಾಡುತ್ತೀರಿ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಜಗದೀಶ್ ಶೆಟ್ಟರ್ ಅವರು RSSನಿಂದ ಬಂದವರು. ದುರದೃಷ್ಟವಶಾತ್, ಕಾಂಗ್ರೆಸ್ ಸೈದ್ಧಾಂತಿಕ ಕದನದಲ್ಲಿ ಸೋತು ಹೋಗಿದೆ. ಇದೇ ಏನು ನಿಮ್ಮ ಜಾತ್ಯತೀತತೆಯ ಹೋರಾಟ? ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀವು ನಡೆಸುವ ಹೋರಾಟ ಇದೇ ಏನು?” ಎಂದು ಪ್ರಶ್ನಿಸಿದರು. “ಮತ್ತೆ ಅವರ ಜೋಕರ್ಗಳು, ಗುಲಾಮರು ಮತ್ತು ಸೇವಕರು ನಮ್ಮ ವಿರುದ್ಧ ಅಂತಹ ಆರೋಪಗಳನ್ನು ಮಾಡುತ್ತಾರೆ” ಎಂದು ತಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸುವ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.
ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಹಿಜಾಬ್ ಬಗ್ಗೆ ಬಾಯಿ ಬಿಡುತ್ತಿಲ್ಲ ಏಕೆ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದರು.ಕಾಂಗ್ರೆಸ್ಸಿಗರಿಗೆ ಇದೀಗ ಹಿಂದೂಗಳ ಮತ ಕೈತಪ್ಪುವ ಭೀತಿ ಎದುರಾಗಿದೆ. ಅದಕ್ಕಾಗಿ ಬಜರಂಗದಳವನ್ನು ಬ್ಯಾನ್ ಮಾಡುವುದಿಲ್ಲ. ನಿಯಂತ್ರಣ ಮಾಡುತ್ತೇವೆ ವರಸೆ ಬದಲಿಸಿದ್ದಾರೆ ಎಂದು ವ್ಯಂಗವಾಡಿದರು.
ದುರ್ಗಪ್ಪ ಬಿಜವಾಡ ಅವರು ಶಾಸಕರಾದರೆ ಪ್ರಮಾಣ ವಚನದ ವೇಳೆ ಹಿಜಾಬ್ ಧರಿಸಿದ ಮಹಿಳೆಯದೊಂದಿಗೆ ವಿಧಾನಸೌಧಕ್ಕೆ ಹೋಗುತ್ತಾರೆ ಎಂಬುದಕ್ಕೆ ನಾನೇ ಗ್ಯಾರಂಟಿ. ಶೆಟ್ಟರ ಅವರಿಗೆ ನಿಜವಾಗಿಯೂ ಜಾತ್ಯಾತೀತ ಮನೋಭಾವ ಇದ್ದರೆ, ಅನಗತ್ಯವಾಗಿ ಸ್ಧಳಾಂತರಿಸಿದ ಭೈರಿದೇವರಕೊಪ್ಪದ ದರ್ಗಾವನ್ನು ಮತ್ತೆ ಮೊದಲಿನಂತೆ ಮಾಡಿ ತೋರಿಸಲಿ ಎಂದು ಸವಾಲೆಸೆದರು.