ಕೆ.ಆರ್.ಪುರಂ: ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ದಬ್ಬಾಳಿಕೆಯಿಂದ ಜನ ರೋಸಿ ಹೋಗಿದ್ದು ಈಗ ಕ್ಷೇತ್ರದ ಜನ ಬದಲಾವಣೆ ಬಯಸಿದ್ದು, ಹಣ ಮತ್ತು ಅಧಿಕಾರದ ದಾಹಕ್ಕೆ ಆಸೆ ಪಟ್ಟು ಕ್ಷೇತ್ರದ ಜನತೆಗೆ ಮೊಸಮಾಡಿದ ಭ್ರಷ್ಟ ಶಾಸಕ ಬೈರತಿ ಬಸವರಾಜ್ ರನ್ನು ಈಸಲ ಸೋಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾರರಿಗೆ ಕರೆ ನೀಡಿದರು.
ಕೆಆರ್ ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಮೋಹನ್ ಬಾಬು ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರು. ವಿಜನಾಪುರದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಮಮೂರ್ತಿನಗರ ದಿಂದ ಐಟಿಐ ಗೇಟ್ ವರೆಗೆ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.ಕಾಂಗ್ರೆಸ್ ಪಕ್ಷದ ಸಾವಿರಕ್ಕೂ ಅಧಿಕ ಕಾರ್ಯಕರ್ತರು ರೋಡ್ ಶೋ ನಲ್ಲಿ ಭಾಗವಹಿಸಿ ಡಿಕೆ ಮೋಹನ್ ಬಾಬು ಪರವಾಗಿ ಜೈಕಾರ ಹಾಕಿದರು.
ಇಂದು ಜನರಿಗೆ ನ್ಯಾಯ ನೀಡುವ ಪಕ್ಷ ಅಂತಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಭರವಸೆಗಳನ್ನು ಜಾರಿಗೆ ತರಲಿದೆ ಎಂದರು.
ಹತ್ತಾರು ವರ್ಷಗಳಿಂದ ಕೆಆರ್ ಪುರ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಮತದಾರರು ಬದಲಾವಣೆ ಬಯಸಿದ್ದು ಈ ಭಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ,ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಮಂಜುನಾಥ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.