ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು, ನಗರದ್ಯಾಂತ ಪೊಲೀಸರು ಈಗಾಗಲೇ ಕಟ್ಟೆಚ್ಚರವಹಿಸಿದ್ದು, ಮತದಾನದ ದಿನ ಭದ್ರತೆಗಾಗಿ ಹರಸಾಹಸ ಪಡುತ್ತಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಭಾರೀ ಪೊಲೀಸ್ ಭದ್ರತೆ (Police Security) ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar), ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.
ಭದ್ರತಾ ಕಾರ್ಯದಲ್ಲಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್ಪೆಕ್ಟರ್, 2,610 ಪಿಎಸ್ಐ, 5,803 ಎಎಸ್ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಇವರೊಂದಿಗೆ 8.5 ಸಾವಿರ ಹೋಂಗಾರ್ಡ್ಗಳನ್ನು, 650 ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಯಾವತ್ತು ನಿಯೋಜಿಸಿರಲಿಲ್ಲ, ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ ಮಾಡಲಾಗಿದೆ ಎಂದರು.
ಸೂಕ್ಷ್ಮ ಮತಗಟ್ಟೆಗಳ ಮಾಹಿತಿ
ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ ಎಂದು ಹೇಳಿದ ಅಲೋಕ್ ಕುಮಾರ್, ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣ ಕಡೆ ಹೆಚ್ಚಿನ ನಿಗಾ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗಬಾರದೆಂದು ಐಪಿಎಸ್ ಅಧಿಕಾರಿಗಳ ಮೂಲಕ 5 ದಿನಗಳಿಂದ ನಿಗಾ ಇಡಲಾಗಿದೆ. 11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಹೇಗಿದೆ ಪೊಲೀಸ್ ಭದ್ರತೆ?
ಬೆಂಗಳೂರು ನಗರದ್ಯಾಂತ ಪೊಲೀಸರು ಈಗಾಗಲೇ ಕಟ್ಟೆಚ್ಚರವಹಿಸಿದ್ದು, ಮತದಾನದ ದಿನ ಭದ್ರತೆಗಾಗಿ 16 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 13 ಸಾವಿರ ಪೊಲೀಸರು, KSRP ಹಾಗೂ ಹೋಮ್ ಗಾರ್ಡ್ಗಳು ಸೇರಿದಂತೆ ಒಟ್ಟು 16 ಸಾವಿರ ಸಿಬ್ಬಂದಿ ನಿಯೋಜನೆ ಮಾಡಾಗಿದೆ ಎಂದು ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಹೇಳಿದ್ದಾರೆ.
ನಗರದಾದ್ಯಂತ ಒಟ್ಟು 7916 ಮತಗಟ್ಟೆಗಳಿದ್ದು, ಅದರಲ್ಲಿ 1907 ಅತಿಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ BSF, RPF, CRPF ಹಾಗೂ SAP ನಿಯೋಜನೆ ಮಾಡಲಾಗಿದೆ. ಸುಮಾರು 4900 ಜನ ಸಿಬ್ಬಂದಿ ಕೇಂದ್ರದಿಂದ ಭದ್ರತೆಗೆ ನಿಯೋಜನ ಮಾಡಲಾಗಿದೆ. 18-20 ಮತಗಟ್ಟೆಗಳಿಗೆ ಓರ್ವ ಸೆಕ್ಟರ್ ಮೊಬೈಲ್ಸ್ ನೇಮಕ ಮಾಡಲಾಗಿದೆ. ಇದರ ಉಸ್ತುವಾರಿಗಾಗಿ ಓರ್ವ ಇನ್ಸ್ಪೆಕ್ಟರ್ ನಿಯೋಜನೆ ಮಾಡಲಾಗಿದೆ. ಆಯಾ ವಿಭಾಗದ ಡಿಸಿಪಿಗಳು ಸೆಕ್ಟರ್ ಮೊಬೈಲ್ಸ್ ಮೇಲೆ ನಿಗಾ ಇಡಲಿದ್ದಾರೆ. ಒಟ್ಟಾರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಶರಣಪ್ಪ ಹೇಳಿದ್ದಾರೆ.