ಚಾಮರಾಜನಗರ: SSLC ಪರೀಕ್ಷೆ ಫಲಿತಾಂಶವು ಸೋಮವಾರ ಹೊರಬಿದ್ದಿದ್ದು, ಈ ಬಾರಿಯೂ ಸಹ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಗೆ ಮೂವರು ವಿದ್ಯಾರ್ಥಿನಿಯರು ಟಾಫರ್ ಆಗಿದ್ದು, ಮೂವರು ಕೂಡಾ 619 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಮೂವರು ಸಹ ಕೊಳ್ಳೇಗಾಲ ತಾಲೂಕಿನವರಾಗಿರುವುದು ಅಚ್ಚರಿ ಮೂಡಿಸಿದೆ.
ಕೊಳ್ಳೇಗಾಲದ ಶ್ರೀ ವಾಸವಿ ವಿದ್ಯಾಕೇಂದ್ರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜಿ.ಬಿ. ಶ್ರೀಜಾ, ಕೆ. ಪಲ್ಲವಿ ಹಾಗೂ ನಿಸರ್ಗ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆರ್. ತೇಜಶ್ವಿನಿ ತಲಾ 619 ಅಂಕಗಳನ್ನು ಪಡೆದುಕೊಂಡಿದ್ದಾರೆ.
2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ.93.92 ರಷ್ಟು ಫಲಿತಾಂಶ ಗಳಿಸಿದ್ದು ರಾಜ್ಯದಲ್ಲಿ ಜಿಲ್ಲೆಯು 7ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಬಾರಿ ಶೇ.92.13 ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯು 9ನೇ ಸ್ಥಾನ ಪಡೆದಿತ್ತು. ಈ ಬಾರಿ ಶೇ.2 ಹೆಚ್ಚು ಫಲಿತಾಂಶ ಗಳಿಸುವ ಮೂಲಕ 2 ಸ್ಥಾನ ಮೇಲಕ್ಕೆ ಜಿಗಿದಿದೆ. ಇದರಿಂದ ಫಲಿತಾಂಶದಲ್ಲಿ ಜಿಲ್ಲೆಯು 2ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ. ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಣೆ ಮಾಡಿದರು.
5524 ಬಾಲಕರು, 5622 ಬಾಲಕಿಯರು ಸೇರಿದಂತೆ ಒಟ್ಟು 11146 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರ ಪೈಕಿ 5086 ಬಾಲಕರು, 5328 ಬಾಲಕಿಯರು ಸೇರಿದಂತೆ ಒಟ್ಟು 10468 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಶೇ. 93.92 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಕಳೆದ ಬಾರಿಗಿಂತ ಶೇ. 2ರಷ್ಟು ಫಲಿತಾಂಶ ಏರಿಕೆಯಾಗಿದೆ. ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ 7ನೇ ಸ್ಥಾನಕ್ಕೆ ಏರಿದೆ.
ಕನ್ನಡ ಮಾಧ್ಯಮ ಫಲಿತಾಂಶವು ಶೇ.92.10ರಷ್ಟಿದ್ದರೆ, ಆಂಗ್ಲ ಮಾಧ್ಯಮ ಫಲಿತಾಂಶವು ಶೇ. 97.88 ರಷ್ಟಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ. 94.08ರಷ್ಟು, ನಗರ ಪ್ರದೇಶದ ವಿದ್ಯಾರ್ಥಿಗಳು ಶೇ. 93.63ರಷ್ಟು ತೇರ್ಗಡೆ ಹೊಂದಿದ್ದಾರೆ. ಶಾಲಾವಾರು ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಶೇ. 93.50 ರಷ್ಟು, ಅನುದಾನಿತ ಶಾಲೆಗಳು ಶೇ. 91.28ರಷ್ಟು, ಅನುದಾನ ರಹಿತ ಶಾಲೆಗಳು ಶೇ. 97.74ರಷ್ಟು ಫಲಿತಾಂಶ ಪಡೆದಿವೆ.
ಕೊಳ್ಳೇಗಾಲ ಶೇ. 98.09ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಯಳಂದೂರು ಶೇ. 96.26ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹನೂರು ಶೇ. 95.03ರಷ್ಟು ಫಲಿತಾಂಶದೊಂದಿಗೆ ಮೂರನೇ ಸ್ಥಾನದಲ್ಲಿದೆ. ಗುಂಡ್ಲುಪೇಟೆ ಶೇ. 93.20ರಷ್ಟು ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನ ಹಾಗೂ ಚಾಮರಾಜನಗರ ಶೇ. 90.80ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಒಟ್ಟು 49 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಇದರಲ್ಲಿ ಸರ್ಕಾರಿ ಶಾಲೆಗಳು 14, ಅನುದಾನಿತ ಶಾಲೆಗಳು 9 ಹಾಗೂ ಅನುದಾನ ರಹಿತ ಶಾಲೆಗಳು 26 ಇವೆ.ಉತ್ತಮ ಫಲಿತಾಂಶ ವಿದ್ಯಾರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕು ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಇಂಟರ್ನೆಟ್ ಕೇಂದ್ರಗಳಿಗೆ ತೆರಳಿ ಫಲಿತಾಂಶ ವೀಕ್ಷಿಸಿದರು. ಅಲ್ಲದೇ ಕೆಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್ಗಳ ಮೂಲಕವೂ ವೀಕ್ಷಣೆ ಮಾಡಿದರು.
ತಾಲೂಕು ಮಟ್ಟದಲ್ಲಿ ಬಿಇಒಗಳ ಸಭೆ ಮಾಡಿ, ಎಲ್ಲಾ ವಿಷಯಗಳ ಶಿಕ್ಷಕರಿಗೂ ತರಬೇತಿ ನೀಡಲಾಗಿತ್ತು. ಪ್ರತಿದಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ರಾತ್ರಿ ವೇಳೆ ಬೋಧನೆ, ರಸಪ್ರಶ್ನೆ, ಮನೆ ಮನೆ ಭೇಟಿ, ಮೂರು ಹಂತದ ಪರೀಕ್ಷೆಗಳ ಜೊತೆಗೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹೆಚ್ಚು ಒತ್ತು ನೀಡಿದ ಫಲವಾಗಿ ಫಲಿತಾಂಶ 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ ಎಂದು ಪ್ರಭಾರ ಉಪನಿರ್ದೇಶಕರು ಪಿ. ಮಂಜುನಾಥ್ ಅವರು ತಿಳಿಸಿದರು.
ನನಗೆ ತುಂಬಾ ಖುಷಿಯಾಗುತ್ತಿದೆ ಸತತವಾಗಿ ಪಠ್ಯಪುಸ್ತಕಗಳನ್ನು ಓದಿದ್ದರಿಂದ, ಪ್ರತಿದಿನ 5ರಿಂದ 6 ಗಂಟೆಗಳ ಕಾಲ ಆಯಾ ದಿನದ ಪಾಠಗಳನ್ನು ಅಂದೇ ಓದಿಕೊಂಡಿದ್ದರಿಂದ ಗರಿಷ್ಠ ಅಂಕವನ್ನು ಗಳಿಸಲು ಸಹಕಾರಿಯಾಯಿತು ಎಂದು ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ತೇಜಸ್ವಿನಿ ತಿಳಿಸಿದಳು.
ಹಾಗೆ ಕೊಳ್ಳೆಗಾಲದ ಶ್ರೀ ವಾಸವಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಜಿ.ಬಿ. ಶ್ರೀಜಾ ಮಾತನಾಡಿ ತುಂಬಾ ಸಂತೋಷವಾಗುತ್ತಿದೆ. ಗರಿಷ್ಠ ಅಂಕ ಪಡೆಯಲು, ಪರೀಕ್ಷೆ ಹತ್ತಿರ ಬಂದಂತಹ ಸಂದರ್ಭದಲ್ಲಿ 4ರಿಂದ 5 ಗಂಟೆಗಳ ಕಾಲ ಓದುತ್ತಿದ್ದೆ, ಇನ್ನೂ ಹೆಚ್ಚಿನ ಅಂಕ ಬರುವ ನಿರೀಕ್ಷೆಯಲ್ಲಿದ್ದೆ. ಹಾಗಾಗಿ ಮರುಪರಿಶೀಲನೆಗೆ ಅರ್ಜಿ ಹಾಕುತ್ತೇನೆ.
ಅದೇ ರೀತಿ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವಾಸವಿ ಮಾತನಾಡುತ್ತಾ ಅತಿ ಹೆಚ್ಚು ಅಂಕ ಬಂದು ಜಿಲ್ಲೆಗೆ ಟಾಫರ್ ಆಗಿರುವುದು ತುಂಬಾ ಖುಷಿ ತಂದಿದೆ. ಪ್ರತಿದಿನ ಬೆಳಗ್ಗೆ ಓದುವ ಮೂಲಕ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಶಾಲೆಯಲ್ಲಿ ಶಿಕ್ಷಕರು ನಮಗೆ ತುಂಬಾ ಸಹಕಾರ ನೀಡಿದರು ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ