ನವದೆಹಲಿ: ಛತ್ತೀಸ್ಗಢದ ಕಾಂಗ್ರೆಸ್ ನಾಯಕರೊಬ್ಬರ ಸೋದರ ಮತ್ತು ಹಿರಿಯ ಐಎಎಸ್ ಅಧಿಕಾರಿ ಸೇರಿಕೊಂಡು ಮದ್ಯ ಮಾರಾಟದಲ್ಲಿ ಭಾರಿ ಅಕ್ರಮ ಎಸಗುವ ಮೂಲಕ ರಾಜ್ಯದ ಬೊಕ್ಕಸಕ್ಕೆ 4 ವರ್ಷಗಳಲ್ಲಿ 2000 ಕೋಟಿ ರೂ ವಂಚಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐಎಎಸ್ ಅಧಿಕಾರಿ ಅನಿಲ್ ಟುಟೇಜ್ ಎಂಬಾತನನ್ನು ಈ ಹಿಂದೆಯೇ ಬಂಧಿಸಿದ್ದ ಜಾರಿ ನಿರ್ದೇಶನಾಲಯ, ಇದೀಗ ಅನ್ವರ್ ಧೇಬರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಇಬ್ಬರೂ ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ರಾಜ್ಯದಲ್ಲಿ ಚುನಾವಣೆ ವೆಚ್ಚಕ್ಕೂ ಬಳಸಲಾಗಿತ್ತು. ಇದರಲ್ಲಿ ಸಾಕಷ್ಟು ಜನ ಪಾಲು ಹಂಚಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಭಾಗಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿರುವ ಕಾರಣ, ಮುಂದಿನ ದಿನಗಳಲ್ಲಿ ಈ ಹಗರಣ ಇನ್ನಷ್ಟು ರಾಜಕೀಯ ನಾಯಕರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
ಏನಿದು ಹಗರಣ?:
ಛತ್ತೀಸ್ಗಢದಲ್ಲಿ ಖಾಸಗಿ ಮದ್ಯದಂಗಡಿಗೆ ಅನುಮತಿ ಇಲ್ಲ. ಇರುವ 800 ಅಂಗಡಿಗಳು ಸರ್ಕಾರದ ಸಿಎಸ್ಎಂಸಿಎಲ್ ನಿಗಮಕ್ಕೆ ಸೇರಿವೆ. ಈ ನಿಗಮ ಮಾತ್ರ ಮದ್ಯ ಮಾರಾಟದ ಉಸ್ತುವಾರಿ ಹೊಂದಿದೆ. ಆದರೆ ಈ ಅಂಗಡಿಗಳಲ್ಲಿ ಅಧಿಕೃತದ ಮದ್ಯದ ಜತೆಗೆ ದೇಶೀ ನಿರ್ಮಿತ ಅಕ್ರಮ ಮದ್ಯವನ್ನು ಅನ್ವರ್ ಧೇಬರ್ ಮಾರಾಟ ಮಾಡಿಸಿದ್ದಾನೆ. ಈ ರೀತಿ ಮಾರಾಟವಾದ ಮದ್ಯದಲ್ಲಿ 1 ರೂ. ಕೂಡ ರಾಜ್ಯದ ಖಜಾನೆಗೆ ಹೋಗಿಲ್ಲ. ಸಂಪೂರ್ಣ ಆದಾಯವನ್ನು ಧೇಬರ್ನ ಜಾಲವೇ ಪಡೆದಿದೆ. 2019ರಿಂದ 2022ರ ನಡುವೆ, ಈ ರೀತಿಯ ಅಕ್ರಮ ಮಾರಾಟವು ರಾಜ್ಯದಲ್ಲಿನ ಒಟ್ಟು ಮದ್ಯದ ಮಾರಾಟದ ಶೇ.30-40ರ ಷ್ಟಿತ್ತು ಮತ್ತು 1,200 – 1,500 ಕೋಟಿ ರೂ. ಅಕ್ರಮ ಲಾಭವನ್ನು ಗಳಿಸಿದೆ ಎಂದು ತನಿಖೆ ವೇಳೆ ಕಂಡುಬಂದಿದೆ.
ಇದರ ಜೊತೆಗೆ, ಮಳಿಗೆಗಳಿಗೆ ಅಧಿಕೃತವಾಗಿ ಮದ್ಯ ಸರಬರಾಜು ಮಾಡುವ ಸಂಸ್ಥೆಗಳ ಜೊತೆಗೂ ಅನ್ವರ್ ಡೀಲ್ ಕುದುರಿಸಿದ್ದ. ಅವರಿಂದ ಪ್ರತಿ ಕೇಸ್ಗೆ 75-150 ರೂ. ವಸೂಲಿ ಮಾಡುತ್ತಿದ್ದ. ಅಂದರೆ ಮಳಿಗೆಗಳ ಮೂಲಕ ಮಾರಾಟವಾಗುವ ಪ್ರತಿ ಬಾಟಲ್ನಿಂದಲೂ ಹಣ ಸಂಗ್ರಹಿಸಿದ್ದಾನೆ. ವಿತರಣೆ ಮತ್ತು ಪೂರೈಕೆಯ ಪ್ರತಿ ಹಂತದಲ್ಲೂ ತನ್ನ ಬಂಟರನ್ನು ನೇಮಿಸಿಕೊಂಡಿದ್ದ ಅನ್ವರ್ ಖಾಸಗಿ ಡಿಸ್ಟಿಲರ್ಗಳು, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು, ಗಾಜಿನ ಬಾಟಲಿ ತಯಾರಕರು, ಹಾಲೋಗ್ರಾಮ್ ತಯಾರಕರು, ನಗದು ಸಂಗ್ರಹ ಮಾರಾಟಗಾರರು ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದ ಎಂದು ಇ.ಡಿ. ಹೇಳಿದೆ.