ಮಲಪ್ಪುರಂ: ಯುವತಿಗೆ ಇರಿದ ಯುವಕನೋರ್ವ ಬಳಿಕ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ಕೇರಳದ ಮಲಪ್ಪುರಂನ ತಿರುರಂಗಡಿ ಎಂಬಲ್ಲಿ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ನಲ್ಲಿ ಈ ಘಟನೆ ನಡೆದಿದೆ. ಈ ಬಸ್ ಕೇರಳದ ಮುನ್ನಾರ್ನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಕೃತ್ಯವೆಸಗಿದ ಯುವಕನನ್ನು 25 ವರ್ಷದ ಸನಿಲ್ ಎಂದು ಗುರುತಿಸಲಾಗಿದ್ದು, ಈತ ವಯನಾಡ್ ಮೂಲದವನಾಗಿದ್ದು, ಗೂಡ್ಲುರ್ ಮೂಲದ ಸೀತಾ ಎಂಬಾಕೆಗೆ ಚಾಕುವಿನಿಂದ ಇರಿದಿದ್ದಾನೆ.
ಈ ಇಬ್ಬರೂ ಹಿಂದಿನಿಂದಲೂ ಪರಿಚಯಸ್ಥರಾಗಿದ್ದಾರೆ. ಇನ್ನು ಇವರಿಬ್ಬರು ಬೇರೆ ಬೇರೆ ಕಡೆಗಳಿಂದ ಬಸ್ ಏರಿದ್ದಾರೆ. ಹುಡುಗ ಇಡಪಲ್ನಿಂದ (Edapal) ಬಸ್ ಹತ್ತಿದ್ದರೆ ಹುಡುಗಿ ಅಂಗಮಲೈನಿಂದ (Angamaly) ಬಸ್ ಏರಿದ್ದಾಳೆ. ಮೊದಲಿಗೆ ಇಬ್ಬರು ಬಸ್ನಲ್ಲಿ ಮಧ್ಯದ ಸೀಟ್ನಲ್ಲಿ ಜೊತೆಯಲ್ಲೇ ಕುಳಿತಿದ್ದರು. ಆದರೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಕೊಟ್ಟಕ್ಕಲ್ (Kottakkall) ಬಳಿ ಬಸ್ ತಲುಪಿದಾಗ ಇಬ್ಬರೂ ಇಬ್ಬರೂ ಬಸ್ನ ಹಿಂಭಾಗದ ಸೀಟಿಗೆ ಶಿಫ್ಟ್ ಆಗಿದ್ದಾರೆ ಎಂದು ಬಸ್ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ನಂತರ ಬಸ್ನ ಲೈಟ್ ಆಫ್ ಆದ ನಂತರ ಈ ಚೂರಿ ಇರಿತ ಪ್ರಕರಣ ನಡೆದಿದೆ. ಹುಡುಗಿಗೆ ಒಂದಕ್ಕಿಂತ ಹೆಚ್ಚು ಬಾರಿ ಎದೆಗೆ ಇರಿದ ಯುವಕ ನಂತರ ತನ್ನ ಕತ್ತನ್ನು ಅದೇ ಚಾಕುವಿನಿಂದ ಕುಯ್ದುಕೊಂಡಿದ್ದಾನೆ. ಇದಾದ ಬಳಿಕ ಚಾಕನ್ನು ಬಸ್ನಿಂದ ಹೊರಗೆ ಎಸೆಯಲಾಗಿದೆ. ಕೂಡಲೇ ಬಸ್ನ ಸಿಬ್ಬಂದಿ ಯುವತಿ ಹಾಗೂ ಯುವಕ ಇಬ್ಬರನ್ನು ತಿರುರಂಗಡಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ರಾತ್ರಿಯೇ ಕೋಯಿಕೋಡ್ನ ಮೆಡಿಕಲ್ ಕಾಲೇಜು (Kozhikode Medical College Hospital) ಆಸ್ಪತ್ರೆಗೆ ದಾಖಲಿಸಲಾಗಿದೆ. ಸನಿಲ್ ಕೊಟ್ಟಾಯಂನಲ್ಲಿ ಹೊಟೇಲ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ.