ಬೀಜಿಂಗ್: ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿಕೊಂಡು ನಕಲಿ ಸುದ್ದಿ ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಚೀನಾ ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಚಾಟ್ ಜಿಪಿಟಿ ದುರ್ಬಳಕೆಗಾಗಿ ಚೀನಾದಲ್ಲಿ ಬಂಧನವಾದ ಮೊದಲ ಪ್ರಕರಣ ಇದಾಗಿದೆ.
ಹಾಂಗ್ ಎಂಬಾತ ಚಾಟ್ಜಿಪಿಟಿ ಬಳಸಿ, “ಸ್ಥಳೀಯ ರೈಲೊಂದು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ’ ಎಂಬ ನಕಲಿ ಸುದ್ದಿಯನ್ನು ಎಐ ತಂತ್ರಜ್ಞಾನದ ಸಹಾಯ ದಿಂದ ಸೃಷ್ಟಿಸಿದ್ದಾನೆ. ಇದನ್ನು ಬೈಜಿಯಾಹೋ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದನ್ನು ಚೀನಾ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಗಮನಿಸುವ ವೇಳೆಗೆ, 20ಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, 15,000ಕ್ಕೂ ಹೆಚ್ಚು ವೀವ್ಗಳು ಪಡೆದಿತ್ತು. ಇದನ್ನು ಅನಂತರ ಡಿಲೀಟ್ ಮಾಡಲಾಗಿದೆ. ಇದೀಗ ಈ ಪ್ರಕರಣ ಸಂಬಂಧ ಹಾಂಗ್ ಎಂಬುವವನನ್ನು ಬಂಧಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.