ಬ್ರಿಸೆಲ್: ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಬಳಸುವ ಶಸ್ತ್ರಾಸ್ತ್ರ ಪರಿಕರಗಳ ಪೂರೈಕೆಗೆ ಸಂಬಂಧಿಸಿದಂತೆ ಚೀನಾದ ಕೆಲವು ಕಂಪನಿಗಳ ಮೇಲೆ ನಿರ್ಬಂಧವನ್ನು ಹೇರಲು ಐರೋಪ್ಯ ರಾಷ್ಟ್ರಗಳ ಒಕ್ಕೂಟವು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಒಕ್ಕೂಟದ ಸದಸ್ಯ ರಾಷ್ಟ್ರಗಳು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಏಳು ಉದ್ಯಮಗಳ ಪಟ್ಟಿ ಸಿದ್ಧವಾಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ವರದಿ ಪ್ರಕಾರ, ಚೀನಾದ ಎರಡು ಪ್ರಮುಖ ಸಂಸ್ಥೆಗಳು, 3ಎಚ್ಸಿ ಸೆಮಿ ಕಂಡಕ್ಟರ್ಗಳು, ಕಿಂಗ್ ಪೈ ಟೆಕ್ನಾಲಜಿ, ಹಾಂಗ್ಕಾಂಗ್ನ ಸಿನ್ನೊ ಎಲೆಕ್ಟ್ರಾನಿಕ್ಸ್, ಸಿಗ್ಮಾ ಟೆಕ್ನಾಲಜಿ, ಏಷ್ಯಾ ಪ್ಯಾಸಿಫಿಕ್ ಲಿಂಕ್ಸ್, ಟೊರ್ಡಾನ್ ಇಂಡಸ್ಟ್ರಿ, ಆಲ್ಫಾ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಸೇರಿವೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು, ‘ತಪ್ಪು ನಿರ್ಧಾರ ಕೈಗೊಳ್ಳಬಾರದು. ಒಂದು ವೇಳೆ ಕೈಗೊಂಡರೆ ಚೀನಾ ಕೂಡಾ ತನ್ನ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದೆ. ಆದರೆ ಈ ಬಗ್ಗೆ ಯೂರೋಪಿಯನ್ ಕಮಿಷನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.