ಜೆರುಸಲೇಂ: ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲ್ ಅಧಿಕಾರಿಗಳು ಫೆಲೆಸ್ತೀನಿಯನ್ ಶಾಲೆಯನ್ನು ಕೆಡವಿದ್ದು ಇದನ್ನು ಯುರೋಪಿಯನ್ ಯೂನಿಯನ್ ತೀವ್ರವಾಗಿ ಖಂಡಿಸಿದೆ.
ಬೆಥ್ಲಹೇಮ್ನಿಂದ ಸುಮಾರು 2 ಕಿ.ಮೀ ದೂರದ ಪ್ರದೇಶದಲ್ಲಿರುವ ಈ ಶಾಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಅಥವಾ ಶಾಲೆಯನ್ನು ಸಂದರ್ಶಿಸುವವರ ಸುರಕ್ಷತೆಗೆ ಅಪಾಯಕಾರಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಶಾಲೆಯನ್ನು ಕೆಡವಲು ಇಸ್ರೇಲ್ ಕೋರ್ಟ್ ಆದೇಶಿಸಿದೆ ಎಂದು ಇಸ್ರೇಲ್ ಸೇನೆಯ ಘಟಕವಾಗಿರುವ `ಕೊಗಾಟ್’ನ ಹೇಳಿಕೆ ತಿಳಿಸಿದೆ.
ಕಟ್ಟಡವನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡುವಂತೆ ಕಟ್ಟಡದ ಮಾಲಕರಿಗೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ ಅವರು ಅದನ್ನು ಪಾಲಿಸಿಲ್ಲ. ಆದ್ದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿ ಕಟ್ಟಡವನ್ನು ಕೆಡವಲಾಗಿದೆ ಎಂದು ಹೇಳಿಕೆ ಪ್ರತಿಪಾದಿಸಿದೆ. ಈ ಜಾಗದಲ್ಲಿ ಶಾಲೆ ಇತ್ತು ಎಂಬ ಯಾವುದೇ ಕುರುಹು ಉಳಿಯದಂತೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. `ಎಂದಿನಂತೆ ಶಾಲೆಗೆ ಬಂದಾಗ ಅಲ್ಲಿ ಶಾಲೆಯೇ ಇರಲಿಲ್ಲ. ನಮಗೆ ಕಲಿಯಬೇಕು, ಕಲಿಯಲು ಶಾಲೆಯ ಅಗತ್ಯವಿದೆ.
ಅವರು(ಇಸ್ರೇಲಿಯನ್ನರು) ಧ್ವಂಸ ಮಾಡುವುದನ್ನು ಮುಂದುವರಿಸಲಿ, ನಾವು ಮರು ನಿರ್ಮಿಸುತ್ತೇವೆ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಶಾಲೆಯನ್ನು ನೆಲಸಮಗೊಳಿಸಿದ ಜತೆಗೆ, ಶಾಲೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನೂ, ಪೀಠೋಪಕರಣಗಳನ್ನೂ ಟ್ರಕ್ನಲ್ಲಿ ತುಂಬಿರಿಸಿ ಅವರು ಕೊಂಡೊಯ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ವೆಸ್ಟ್ ಬ್ಯಾಂಕ್ ನಲ್ಲಿ ಕಟ್ಟಡ ನಿರ್ಮಿಸಲು ಪರ್ಮಿಟ್ ಪಡೆಯಬೇಕು ಎಂದು ಇಸ್ರೇಲ್ ಆದೇಶಿಸಿದೆ. ಆದರೆ ನಿರ್ಮಾಣಕ್ಕೆ ಪರ್ಮಿಟ್ ಪಡೆಯುವುದು ಅಸಾಧ್ಯದ ಕಾರ್ಯ ಎಂದು ಫೆಲೆಸ್ತೀನ್ ಪ್ರಜೆಗಳು ಹೇಳುತ್ತಿದ್ದಾರೆ. ಫೆಲೆಸ್ತೀನ್ ಶಾಲೆಯನ್ನು ನೆಲಸಮಗೊಳಿಸಿರುವ ಕಾರ್ಯವನ್ನು ಈ ಪ್ರದೇಶದ ಯೆಹೂದಿ ವಸಾಹತುಗಾರರ ಸಂಘಟನೆ `ದಿ ಗಷ್ ಎಟ್ಝಿಯಾನ್ ರೀಜನಲ್ ಕೌನ್ಸಿಲ್’ ಸ್ವಾಗತಿಸಿದೆ.
ಶಾಲೆಯ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಕಳೆದ 6 ವರ್ಷದಿಂದ ಗಮನ ಸೆಳೆಯುತ್ತಿದ್ದರೂ ವಿಫಲವಾದ ಬಳಿಕ ಕಟ್ಟಡವನ್ನು ಕೆಡವಲಾಗಿದೆ. ಈ ಶಾಲೆಯ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ದಾಖಲಿಸಲಾಗುವುದು ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. `ಶಾಲೆಯ ಕಟ್ಟಡವನ್ನು ನೆಲಸಮಗೊಳಿಸಿರುವುದು ಘೋರ ಅಪರಾಧವಾಗಿದೆ ಮತ್ತು ಶಾಲೆಯ ವಿದ್ಯಾರ್ಥಿಗಳನ್ನು ಮುಕ್ತ, ಸುರಕ್ಷಿತ ಮತ್ತು ಸ್ಥಿರ ಶಿಕ್ಷಣ ಕ್ರಮದಿಂದ ವಂಚಿತಗೊಳಿಸಲಿದೆ’ ಎಂದು ಫೆಲೆಸ್ತೀನ್ ಅಥಾರಿಟಿಯ ಶಿಕ್ಷಣ ಸಚಿವಾಲಯ ಖಂಡಿಸಿದೆ.
ಶಾಲೆ ನೆಲಸಮಗೊಳಿಸಿರುವುದರಿಂದ ಆಘಾತವಾಗಿದೆ.ಇದರಿಂದ ಕನಿಷ್ಟ 60 ಫೆಲೆಸ್ತೀನ್ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಕಟ್ಟಡ ಧ್ವಂಸಗೊಳಿಸಿರುವುದು ಅಂತರಾಷ್ಟ್ರೀಯ ಕಾನೂನಿನಡಿ ಅಕ್ರಮವಾಗಿದ್ದು ಇದು ಫೆಲೆಸ್ತೀನ್ ಜನಸಮುದಾಯದ ಬವಣೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಈಗಾಗಲೇ ತೀವ್ರಗೊಂಡಿರುವ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಿಸಲಿದೆ ಎಂದು ಯುರೋಪಿಯನ್ ಯೂನಿಯನ್ನ ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ.