ಜೈಪುರ: ಐಪಿಎಲ್ನಲ್ಲಿ (IPL) ನೋಬಾಲ್ ವಿವಾದಗಳು (Noball Controversy) ಇದೇ ಮೊದಲೇನಲ್ಲಾ. ಪ್ರತೀ ಪಂದ್ಯದಲ್ಲೂ ಒಂದಿಲ್ಲೊಂದು ನೋಬಾಲ್ ಇದ್ದೇ ಇರುತ್ತವೆ. ಆದ್ರೆ ಕೆಲವೊಂದು ಪಂದ್ಯಗಳಲ್ಲಿ ಡೆತ್ ಓವರ್ಗಳಲ್ಲಿ ನೀಡುವ ನೋಬಾಲ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿವೆ.
ಭಾನುವಾರ ರಾಜಸ್ಥಾನ್ ರಾಯಲ್ಸ್ (Rajasthan Royals) ಹಾಗೂ ಹೈದರಾಬಾದ್ (Sunrisers Hyderabad) ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ಆಟಗಾರ ಸಂದೀಪ್ ಶರ್ಮಾ (Sandeep Sharma) ನೀಡಿದ ನೋಬಾಲ್ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಮ್ಯಾಚ್ ಫಿಕ್ಸಿಂಗ್ ಸದ್ದು ಕೇಳಿಬರುತ್ತಿದೆ.
ತವರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಬೌಲಿಂಗ್ನಲ್ಲಿದ್ದ ಸಂದೀಪ್ ಶರ್ಮಾ 19 ರನ್ ಬೇಕಿದ್ದಾಗ 14 ರನ್ ಚಚ್ಚಿಸಿಕೊಂಡಿದ್ದರು. ಕೊನೇ ಎಸೆತದಲ್ಲಿ 5 ರನ್ ಅಗತ್ಯವಿದ್ದಾಗ ಕ್ರೀಸ್ನಲ್ಲಿದ್ದ ಅಬ್ದುಲ್ ಸಮದ್ ಸಿಕ್ಸ್ ಸಿಡಿಸಲು ಪ್ರಯತ್ನಿಸಿ ಕ್ಯಾಚ್ ನೀಡಿದ್ದರು. ಆದ್ರೆ ಸಂದೀಪ್ ಶರ್ಮಾ ಕ್ರೀಸ್ನಲ್ಲಿ ನೋಬಾಲ್ ಕೊಟ್ಟಿದ್ದರು. ಇದರಿಂದ ರಾಜಸ್ಥಾನ್ ತಂಡಕ್ಕೆ ಪಂದ್ಯಗೆದ್ದ ಖುಷಿ ಮಿಂಚಿನಂತೆ ಮಾಯವಾಗಿ ಸೋಲಿನ ಕಹಿ ಅನುಭವಿಸುವಂತಾಯಿತು.
ಇದಾದ ಬಳಿಕ ಇದು ಪಕ್ಕಾ ಮ್ಯಾಚ್ ಫಿಕ್ಸಿಂಗ್ ಎಂದು ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗುತ್ತಿದೆ. ಸಂದೀಪ್ ಶರ್ಮಾ ಹಾಗೂ ರಾಜಸ್ಥಾನ್ ತಂಡದ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಐಪಿಎಲ್ನಲ್ಲಿ ಈ ಹಿಂದೆಯೂ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಅಜಿತ್ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಫ್ರಿನ್ಸಿಪಾಲ್ ಗುರುನಾಥ್ ಮೇಯಪ್ಪನ್ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್ ಅಲ್ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು
BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳುವುದೇನು?
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ಹೇಳಿದೆ.