ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ನಡೆಯುತ್ತಿದೆ. ಜನರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಬುಧವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತದಾನ ಮಾಡಿದರು. ಕ್ಷೇತ್ರದ ಶಾಸಕರೂ ಆಗಿರುವ ಅವರು, ತಾಲೂಕಿನ ಮತಗಟ್ಟೆ ಸಂಖ್ಯೆ 134ರಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು.
ಮತಗಟ್ಟೆಗೆ ಆಗಮಿಸುವುದಕ್ಕೂ ಮೊದಲು ಕುಟುಂಬದೊಂದಿಗೆ ದೇವಾಲಯಕ್ಕೆ ತೆರಳಿದ ಬಿ. ಎಸ್. ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಪ್ರತಿ ಬಾರಿಯು ಯಡಿಯೂರಪ್ಪ ಬೆಳ್ಳಂಬೆಳಗ್ಗೆಯೇ ಮತದಾನ ಮಾಡುತ್ತಾರೆ
ಯಡಿಯೂರಪ್ಪ ಜೊತೆಗೆ ಪುತ್ರ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ. ವೈ. ವಿಜಯೇಂದ್ರ ಸಹ ಮತದಾನ ಮಾಡಿದರು.
ಯಡಿಯೂರಪ್ಪ ಮಾತು ಮತದಾನದ ಬಳಿಕ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, “ಎಲ್ಲರ ಆಶೀರ್ವಾದದಿಂದ ವಿಜಯೇಂದ್ರ 40 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತದಾನದ ಬಳಿಕ ಮಾತನಾಡಿದ ಬಿ. ವೈ. ರಾಘವೇಂದ್ರ, “ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶಿವಮೊಗ್ಗ ಮಾತ್ರವಲ್ಲ ರಾಜ್ಯದಲ್ಲೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಇಂದು ಮಳೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ಜನರು ಬೇಗನೆ ಬಂದು ಮತದಾನ ಮಾಡಬೇಕು” ಎಂದು ಕರೆ ನೀಡಿದರು.