ಬೆಂಗಳೂರು: PSI ಹಗರಣಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ (Amrut Paul)ಅವರನ್ನು ಅಕ್ರಮವಾಗಿ ವಶದಲ್ಲಿ ಇಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ಹೈಕೋರ್ಟ್ ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಅಲ್ಲದೆ, ಅಮೃತ್ ಪೌಲ್ ಅವರ ನ್ಯಾಯಾಂಗ ಬಂಧನದ ವಿಸ್ತರಣೆಯನ್ನು ಯಾವುದೇ ಕೋರಿಕೆ ಇಲ್ಲದೇ,
ವಿಚಾರಣಾಧೀನ ನ್ಯಾಯಾಲಯ ವಿಸ್ತರಣೆ ಮಾಡಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ನ್ಯಾಯಪೀಠವು ವಿಚಾರಣೆ ನಡೆಸಿತು. ಅಲ್ಲದೆ, ಅಪರಾಧ ತನಿಖಾ ದಳಕ್ಕೆ ನೋಟಿಸ್ ಜಾರಿ ಮಾಡಿದೆ. ಕಳೆದ ವರ್ಷ ಪೌಲ್ರನ್ನು ಬಂಧನ ಮಾಡಲಾಗಿದ್ದು, ಚಾರ್ಜ್ಶೀಟ್ ಸಲ್ಲಿಸಿ ಹಲವು ತಿಂಗಳಾದರೂ ಅವರನ್ನು ಇನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರದಿಂದ ಪ್ರಾಸಿಕ್ಯೂಷನ್ ಮಾಡಲು ಅನುಮತಿಯನ್ನೂ ಪಡೆಯಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.