ಗೋಕಾಕ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ ಮಧ್ಯರಾತ್ರಿ ವರೆಗೂ ಸಿಡಿ ಬಿಡುಗಡೆ ಮಾಡುವುದಾಗಿ ತಮ್ಮನ್ನು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಅವರು ಬುಧವಾರ ತಮ್ಮ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘‘ಚುನಾವಣೆ ಘೋಷಣೆ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೂ ಸಿಡಿ ಬಿಡುಗಡೆ ಮಾಡುವುದಾಗಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಲೇ ಬಂದಿದ್ದಾರೆ. ಸಿಡಿ ಪ್ರಕರಣ ಸಿಬಿಐಗೆ ವಹಿಸಬೇಕು’’, ಎಂದು ಒತ್ತಾಯಿಸಿದರು.
‘‘ನೀನು ಬೆಳಗಾವಿ ಗ್ರಾಮೀಣದಿಂದ ಹಿಂದೆ ಸರಿಯದಿದ್ದರೆ ಸಿಡಿ ಬಿಡುತ್ತೇನೆ ಎಂದಿದ್ದಾನೆ. ನಾನೂ ಬಿಡು ಎಂದು ಹೇಳಿದ್ದೇನೆ. ಈ ಪ್ರಕರಣದಲ್ಲಿ ನೂರಾರು ಜನ ಸಿಲುಕಿದ್ದಾರೆ. ಯುವತಿ, ನರೇಶ್ ಮತ್ತು ಶ್ರವಣ್ ಹಾಗೂ ಡಿಕೆ ಶಿವಕುಮಾರ್ ಅವರಿಂಯಿಂದ ಅನೇಕರ ಬಾಳು ಹಾಳಾಗಿದೆ. ಸಿಬಿಐಗೆ ತನಿಖೆಗೆ ನೀಡಿದ್ದೇ ಆದಲ್ಲಿ ನಾನೊಬ್ಬನಲ್ಲ, ನೂರಾರು ಜನ ನೆಮ್ಮದಿಯಿಂದ ಬಾಳ್ವೆ ಮಾಡುತ್ತಾರೆ’’, ಎಂದ ಅವರು, ‘‘ನನ್ನ ಕುಟುಂಬ ಮತ್ತು ನನ್ನ ಕ್ಷೇತ್ರದ ಜನ ನನ್ನ ಬೆನ್ನಿಗೆ ಇದ್ದಾರೆ. ಹೀಗಾಗಿ ನಾನು ಯಾವುದೇ ಬ್ಲ್ಯಾಕ್ ಮೇಲ್ಗೆ ಹೆದರುವುದಿಲ್ಲ’’, ಎಂದರು.
ಇದೇವೇಳೆ ಡಿಕೆ ಶಿವಕುಮಾರ್ ಈ ಮೊದಲು ಒಳ್ಳೆಯ ವ್ಯಕ್ತಿಯಾಗಿದ್ದ. ಈಗ ಏಕೆ ಹೀಗಾಡುತ್ತಿದ್ದಾನೋ ಗೊತ್ತಿಲ್ಲ. ವಿಷ ಕನ್ಯೆಯ ಸಹವಾಸದಿಂದ ಡಿಕೆಶಿ ಹೊರಬರಬೇಕು ಎಂದು ಮಾರ್ಮಿಕವಾಗಿ ಹೇಳಿದರು.
‘‘ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಅಪಾರ ವಿಶ್ವಾಸ ಹೊಂದಿದೆ. ಕೇಂದ್ರ ನಾಯಕರ ಪ್ರಚಾರದಿಂದ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ. ಮುಂದಿನ ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರು ಈ ಪ್ರಕರಣ ಸಿಬಿಐಗೆ ನೀಡುವಂತೆ ಮನವಿ ಮಾಡುತ್ತೇನೆ’’, ಎಂದರು.
ರಾತ್ರಿ 12.30ಕ್ಕೆ ಫೋನ್ ಮಾಡಿ ಬ್ಲ್ಯಾಕ್ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ ಅವರ ಮೇಲೆ ಆರೋಪ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಆರೋಪಕ್ಕೆ ಪೂರಕವಾಗಿ ಅವರು ಫೋನ್ ಕರೆಯ ಸ್ಕ್ರೀನ್ ಶಾಟ್, ಕಾಲ್ ರೆಕಾರ್ಡ್ ರಿಲೀಸ್ ಮಾಡಲಿ. ಯಾವುದೇ ಮೊಬೈಲ್ ಗೆ ಕಾಲ್ ಬಂದಿದ್ದರೂ ಅದರ ದಾಖಲೆ ನೀಡಲಿ. ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಯಾಚಿಸಲಿ ಎಂದು ಸವಾಲು ಹಾಕಿದರು.
ಮಾನ ಮರ್ಯಾದೆ ಇದ್ದರೆ ತಕ್ಷಣ ಪೋನ್ ನಂಬರ್ ರಿಲೀಸ್ ಮಾಡಿ, ಇಲ್ಲವೇ ಕ್ಷಮೆ ಕೇಳಿ. ನಾವು ಸಹನೆಯಿಂದ ಆರೋಪ, ಟೀಕೆಗಳಿಗೆ ಇಷ್ಟು ದಿನ ಉತ್ತರ ಕೊಟ್ಟಿರಲಿಲ್ಲ. ನಿಮ್ಮ ಉದ್ದಟತನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದರು.