ಬೆಂಗಳೂರು: ಈ ಬಾರಿ 40 ಕ್ಕಿಂತ ಹೆಚ್ಚು ಸ್ಥಾನವನ್ನು ಬೊಮ್ಮಾಯಿ ಸರ್ಕಾರ ಪಡೆಯುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಬಗೆದಿರುವ ದ್ರೋಹವನ್ನು ಕರ್ನಾಟಕದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವನ್ನು ಮೋದಿ ಸರ್ಕಾರ ಸಂಸತ್ತಿನಲ್ಲಿ ತಿರಸ್ಕರಿಸಿದೆ. ಸರ್ವರಿಗೂ ಮೋಸ, ಸರ್ವರಿಗೂ ದ್ರೋಹ, ಸರ್ವರಿಗೂ ವಂಚನೆ ಎಂಬುವುದು ಇದರಿಂದ ಸಾಬೀತಾಗಿದೆ’ ಎಂದು ಖರ್ಗೆ ಹೇಳಿದ್ದಾರೆ.
ಲಿಂಗಾಯತರು, ಒಕ್ಕಲಿಗರು, ಎಸ್ಸಿ, ಎಸ್ಟಿ ಸಮುದಾಯದ ಜೊತೆ ಬಿಜೆಪಿ ಸರ್ಕಾರ ಮೋಸದ ಮೀಸಲಾತಿ ಮೂಲಕ ಚೆಲ್ಲಾಟ ಆಡಿದ್ದು ಏಕೆ? ಬಿಜೆಪಿ ಡಬಲ್ ಎಂಜಿನ್ ಸರ್ಕಾರ ತನ್ನ ಮೀಸಲಾತಿ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಸಮರ್ಥಿಸಿಕೊಳ್ಳಲಿಲ್ಲ ಏಕೆ? ರಾಜ್ಯ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಹೆಚ್ಚಿಸಿದ್ದ ಮೀಸಲಾತಿಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿದ್ದು ಏಕೆ? ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಕೇಂದ್ರ ಸೇರಿಸಲಿಲ್ಲ ಏಕೆ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.