ದಾವಣಗೆರೆ: ನಾಡಿನ ಖ್ಯಾತ ಅಕ್ಷರ ದಾಸೋಹಿ ಪುಟ್ಟಮ್ಮಜ್ಜಿ (94) ವಿಧಿವಶರಾಗಿದ್ದಾರೆ.ಕರ್ನಾಟಕದ ಸಾವಿತ್ರಿ ಬಾಯಿ ಫುಲೆ ಎಂದೇ ಪ್ರಸಿದ್ಧರಾಗಿದ್ದ ಇವರು ತಿವ್ರ ಅನಾರೋಗ್ಯ ಹಿನ್ನೆಲೆ ಹಾಸಿಗೆ ಹಿಡಿದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟಮ್ಮಜ್ಜಿ ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ಇವರು ರಾಣೇಬೆನ್ನೂರು ತಾಲೂಕಿನ, ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣ್ಣಕ್ಕೆ ಹೊಂದಿಕೊಂಡಿರುವ ಕುಮಾರಪಟ್ಟಣಂ ಗ್ರಾಮದವರಾಗಿದ್ದು ಹಾವೇರಿ ಜಿಲ್ಲೆಯ ಹಿರಿಮೆಗೆ ಗರಿಯಂತಿದ್ದರು.ಗ್ರಾಮದ ಮಕ್ಕಳ ವಿದ್ಯಾಭ್ಯಾಸದ ತೊಂದರೆ ಕಂಡು ಸ್ವಂತ ಶಾಲೆ ತೆರೆದಿದ್ದ ಅಜ್ಜಿ
ರಾಷ್ಟ್ರೀಯ ಹೆದ್ದಾರಿ 4ನ್ನು ದಾಟಿ ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕಿತ್ತು. ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾದ ಹಿನ್ನಲೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದನ್ನು ಗಮನಿಸಿದ ಪುಟ್ಟಮ್ಮಜ್ಜಿ 1988ರಲ್ಲಿ ಸ್ವಂತ ಶಾಲೆ ಆರಂಭಿಸಿದ್ದರು.
ಪತಿ ಮತ್ತು ಕುಟುಂಬದವರ ವಿರೋಧದ ನಡುವೆ ಶಾಲೆ ಆರಂಭಿಸಿದ ಪುಟ್ಟಮ್ಮಜ್ಜಿ ಗ್ರಾಮದ ದೇವಸ್ಥಾನ ಮತ್ತು ಪಾಳುಬಿದ್ದ ಮನೆಗಳನ್ನು ಹುಡುಕಿ ಸ್ವತಃ ಸ್ವಚ್ಚಗೊಳಿಸಿ ಪಾಠ ಮಾಡುತ್ತಿದ್ದರು. ಹಿಂದೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಪುಟ್ಟಮ್ಮ ಹಿರೇಮಠ, 1988 ರಲ್ಲಿ ನಿವೃತ್ತಿ, ಪಿಂಚಣಿ ಹಣದಲ್ಲೇ ಸ್ವಂತ ಶಾಲೆ ತೆರೆದು, ಶಿಕ್ಷಕರಿಗೆ ಸಂಬಳ, ಬಾಡಿಗೆ ನೀಡುತ್ತಿದ್ದರು.
ಅದಲ್ಲದೇ ಇವರು ಭಿಕ್ಷೆ ಬೇಡುತ್ತಿದ್ದ ಮಕ್ಕಳನ್ನು, ಹಾಗೂ ಬಡಮಕ್ಕಳನ್ನು ಗುರುತಿಸಿ ಊಟ ಕೊಟ್ಟು ಪಾಠ ಮಾಡುತ್ತಿದ್ದರು. ಪುಟ್ಟಮ್ಮಜ್ಜಿಯ ಶಿಸ್ತು ಬದ್ಧತೆಯ ಕಾರಣ ಇವರ ಶಾಲೆ ಅನುದಾನಿತಗೊಂಡಿತ್ತು.
ಇದು ಸ್ವಾಮಿ ವಿವೇಕಾನಂದ ಸಂಸ್ಥೆ ಅಡಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದರೂ ಇದು ಪುಟ್ಟಮ್ಮಜ್ಜಿ ಶಾಲೆ ಅಂತಾನೆ ಪ್ರಸಿದ್ಧಿ ಪಡೆದ ಸಂಸ್ಥೆಯಾಗಿದೆ. ಪುಟ್ಟಮ್ಮಜ್ಜಿ ಬಡಮಕ್ಕಳಿಗಾಗಿ ಶಿಕ್ಷಣ ಕ್ರಾಂತಿ ಮಾಡಿದ್ದರಿಂದ ಕರ್ನಾಟಕದ ಸಾವಿತ್ರಿ ಬಾಯಿ ಫುಲೆ ಅಂತಲೆ ಖ್ಯಾತಿ ಕೂಡ ಪಡೆದರು.
ತನ್ನ 7 ಜನ ಮಕ್ಕಳಲ್ಲಿ 6 ಜನ ಮಕ್ಕಳನ್ನು ಶಿಕ್ಷಕ ವೃತ್ತಿಗೆ ಸೇರಿಸಿದ ಅಜ್ಜಿ, ತನ್ನ ಇಡೀ ಜೀವನವನ್ನೇ ಶಾಲೆ ಮತ್ತು ಪಾಠ ಮಾಡಲು ಮೀಸಲಿಟ್ಟು ಕ್ರಾಂತಿಕಾರಿ ಅಜ್ಜಿ ಎಂದೇ ಖ್ಯಾತರಾಗಿದ್ದರು.