ಚಿಕ್ಕಬಳ್ಳಾಪುರ: 2023ರ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಯಲ್ಲಿ ಮತದಾರರನ್ನ ಮತಗಟ್ಟೆಗಳತ್ತ ಸೆಳೆಯಲು ಭಾರತೀಯ ಚುನಾವಣಾ ಆಯೋಗ ಈ ಸಲ ವಿನೂತನ ರೀತಿಯಲ್ಲಿ ಮತಗಟ್ಟೆಗಳ ಸಜ್ಜಗೊಳಿಸಿ ಮತದಾರರ ಆಕರ್ಷಣೆಗೆ ಯತ್ನಿಸಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬರಪೂರ ಮತದಾನವಾಗಿದ್ದು. ಕೆಲವು ಬೂತ್ಗಳಲ್ಲಿ ರಾತ್ರಿ 8 ಗಂಟೆಯವರೆಗೂ ಮತದಾನ ನಡೆದಿತ್ತು. ಇದರಿಂದ ಜಿಲ್ಲೆಯಾದ್ಯಂತ ಇರುವ 10,38,828 ಜನ ಮತದಾರರಲ್ಲಿ ಬರೊಬ್ಬರಿ 8,98,310 ಜನ ಮತದಾರರು ಮತ ಚಲಾಯಿಸಿದ್ದಾರೆ. ಇದರಿಂದ ಶೇಕಡಾ 85.83 ರಷ್ಟು ಮತದಾನವಾಗಿದ್ದು. ರಾಜ್ಯದಲ್ಲಿಯೇ ಅತೀ ಹೆಚ್ಚು ಮತದಾನವಾದ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದರಿಂದ ಜಿಲ್ಲಾ ಚುನಾವಣಾಧಿಕಾರಿ ಎನ್.ಎಂ.ನಾಗರಾಜ್ ಶ್ರಮಿಸಿದ ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ವಿನೂತನ ರೀತಿಯಲ್ಲಿ ಮತದಾನ ಜಾಗೃತಿ
ಇನ್ನು ಜಿಲ್ಲೆಯ ಗೌರೀಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಶ್ರಮಿಸಿತ್ತು. ಸ್ವತಃ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ, ಜಿಲ್ಲೆಯಾಧ್ಯಂತ ಮತದಾನದ ಬಗ್ಗೆ ಪ್ರಮಾಣವಚನ, ವಾಕಥಾನ್, ಬೈಕ್ ರ್ಯಾಲಿ, ರಂಗೋಲಿ ಸ್ಪರ್ಧೆ ಬೀದಿನಾಟಕ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸಿಬ್ಬಂದಿಯನ್ನ ಬಳಸಿಕೊಂಡಿದ್ದರು. ಒಟ್ಟಾರೆ ಚಿಕ್ಕಬಳ್ಳಾಪುರ ಜಿಲ್ಲೆ ಮತದಾನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ.