ಮಂಡ್ಯ : ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷ ಛಿದ್ರ ಮಾಡಿದೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ ಐದು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಬಿದ್ದಿವೆ.
ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ಕಮಲ ಅರಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು ವಿರುದ್ಧ ಸೋಲುಂಡಿದ್ದು, ಭಾರಿ ಮುಖಭಂಗವಾಗಿದೆ.
ಮಂಡ್ಯ ಕ್ಷೇತ್ರದಿಂದ ಗಣಿಗ ರವಿಕುಮಾರ್, ಮದ್ದೂರು ಕ್ಷೇತ್ರದಿಂದ ಕೆ.ಎಂ.ಉದಯ್, ಮಳವಳ್ಳಿ ಕ್ಷೇತ್ರದಿಂದ ನರೇಂದ್ರ ಸ್ವಾಮಿ, ಶ್ರೀರಂಗಪಟ್ಟಣ ಕ್ಷೇತ್ರದಿಂದ ರಮೇಶ್ ಬಂಡಿ ಸಿದ್ದೇಗೌಡ , ನಾಗಮಂಗಲ ಕ್ಷೇತ್ರದಿಂದ ಎನ್.ಚಲುವರಾಯಸ್ವಾಮಿ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.
ಇನ್ನು ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದ ದರ್ಶನ್ ಪುಟ್ಟಣ್ಣಯ್ಯ ಮಾಜಿ ಸಚಿವ, ಹಾಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಮಣಿಸಿದ್ದಾರೆ.
ಕೆ.ಆರ್.ಪೇಟೆ ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಗೆಲುವಿನ ನಗೆ ಬೀರಿದ್ದು, ಉಳಿದ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇನ್ನು ಸತತ ಸೋಲುಗಳಿಂದ ಕಗ್ಗೆಂಟ್ಟಿದ್ದ ಕೈ ನಾಯಕರು ದಳಪತಿಗಳ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ