ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಕಳೆದ ಮೂರು ದಶಕದಲ್ಲೇ ದಾಖಲೆಯ ಸಾಧನೆ ಮಾಡಿದೆ. ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದ್ದು, 65 ಸೀಟು ಗೆದ್ದ ಬಿಜೆಪಿ (BJP) ಅಧಿಕಾರದಿಂದ ಹೊರಬಿದ್ದಿದೆ. ಜೆಡಿಎಸ್ (JDS) 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜ್ಯದ ಚಿತ್ರಣ ಅದಲು ಬದಲಾದರೂ ಕೂಡ ಉಡುಪಿಯಲ್ಲಿ (Udupi) ಬಿಜೆಪಿಯ ಹಿಂದಿನ ದಾಖಲೆ ಹಾಗೆಯೇ ಉಳಿದಿದೆ. ಉಡುಪಿಯಲ್ಲಿ ಐದಕ್ಕೆ ಐದು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
ಕಾಂಗ್ರೆಸ್ ಉಡುಪಿಯ ಕೇಸರಿ ಕೋಟೆಗೆ ದಾಳಿ ಮಾಡುವಲ್ಲಿ ವಿಫಲಯತ್ನ ಮಾಡಿದ್ದು, ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಿದೆ. ಐದರಲ್ಲಿ ನಾಲ್ಕು ಹೊಸ ಮುಖಗಳಿಗೆ ಅವಕಾಶ ನೀಡಿದ್ದ ಬಿಜೆಪಿಯ ಹೊಸ ಪ್ರಯೋಗವು ಉಡುಪಿಯಲ್ಲಿ ಗೆಲುವನ್ನು ಸಾಧಿಸಿದೆ.
ಇದು ಕಾರ್ಯಕರ್ತರ ಗೆಲುವು. ಬಿಜೆಪಿ ಪಕ್ಷದ ಗೆಲುವು. ಕೇವಲ ಒಂದು ತಿಂಗಳೊಳಗೆ ಇಡೀ ವಿಧಾನಸಭಾ ಕ್ಷೇತ್ರದ ಮನೆಗಳಿಗೆ ಜನರ ಮನಗಳಿಗೆ ನನ್ನನ್ನು ಮುಟ್ಟಿಸುವಲ್ಲಿ ಯಶಸ್ವಿ ಆಗಿದ್ದಾರೆ. ಶಾಸಕ ಸುಕುಮಾರ ಶೆಟ್ಟಿ ಬಹಿರಂಗ ಪ್ರಚಾರ ನಡೆಸದಿದ್ದರೂ ಅಂತರಂಗದಿಂದ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಜನರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಸರ್ಕಾರದ ಕೆಲಸದ ಜೊತೆಗೆ ಸಂಘಟನೆಯ ಕೆಲಸಗಳೂ ಬಹಳ ಮುಖ್ಯವಾಗಿದೆ ಎಂದು ಗುರುರಾಜ ಶೆಟ್ಟಿ ಗಂಟಿಹೊಳೆ (Gururaj Shetty Gantihole) ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ, ಇದೊಂದು ಅಚ್ಚರಿಯ ಫಲಿತಾಂಶವಾಗಿದ್ದು, ನಾವು ಇದನ್ನು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 2018ರಲ್ಲಿ ಸೋತ ನಂತರ ಐದು ವರ್ಷ ಕ್ಷೇತ್ರದಲ್ಲೇ ಓಡಾಡಿ ಜನರ ಜೊತೆಗಿದ್ದೆ. ಚುನಾವಣೆಯಲ್ಲಿ ಸೋತು ನನ್ನ ರಾಜಕೀಯ ಜೀವನ ಮುಗಿಸುವ ಬದಲು, ಜನಸೇವೆ ಮಾಡುವ ಅವಕಾಶವನ್ನು ಕೇಳಿದ್ದೆ. ಈ ಫಲಿತಾಂಶದಿಂದ ನನಗೆ ನೋವಾಗಿದೆ. ಬೈಂದೂರು ಜನತೆಯ ಪ್ರೀತಿಗೆ, ಈಗ ನೀಡಿರುವ ಅಭಿಪ್ರಾಯಕ್ಕೆ ನನ್ನ ಎರಡು ಮಾತುಗಳು ಇಲ್ಲ. ನಾನು ಜನರ ಜೊತೆ ಇರುತ್ತೇನೆ ಎಂದಿದ್ದಾರೆ.
ಬೈಂದೂರಿನ ಜಿದ್ದಾಜಿದ್ದಿ ಹೇಗಿತ್ತು? ಯಾರಿಗೆಷ್ಟು ಮತ?
ಬೈಂದೂರು (Byndoor) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು 16,153 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್ನ ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841 ಮತಗಳನ್ನು ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ಸಿ.ಎ ರಮಾನಂದ ಪ್ರಭು 187 ಮತಗಳನ್ನು ಪಡೆದಿದ್ದಾರೆ. ಅಲ್ಲದೇ ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್.ಎಸ್ 626 ಮತಗಳು, ರಾಷ್ಟ್ರೀಯ ಸಮಾಜದಳ (ಆರ್) ಪಕ್ಷದ ಕೊಲ್ಲೂರು ಮಂಜುನಾಥ ನಾಯಕ್ 171, ಪಕ್ಷೇತರ ಅಭ್ಯರ್ಥಿಗಳಾದ ಜಿ. ಚಂದ್ರಶೇಖರ 613, ಬಿ.ಶ್ಯಾಮ 296 ಹಾಗೂ ಬಿ.ಹೆಚ್ ಸುರೇಶ್ ಪೂಜಾರಿ ಅವರು 638 ಮತಗಳನ್ನು ಪಡೆದಿರುತ್ತಾರೆ. ಇಷ್ಟು ಮಾತ್ರವಲ್ಲದೇ 1,208 ನೋಟಾ ಮತದಾನವಾಗಿರುತ್ತದೆ.
ಕಾಂಗ್ರೆಸ್ ಗೆಲ್ಲುತ್ತದೆ ಎಂಬ ನಂಬಿಕೆ ಇದ್ದ ಕ್ಷೇತ್ರದಲ್ಲಿ ಬೈಂದೂರು ಕೂಡ ಒಂದು ಆದರೆ ಬರಿಗಾಲ ಸಂತ 20 ದಿನದಲ್ಲಿ ಮ್ಯಾಜಿಕ್ ಮಾಡಿ ಕ್ಷೇತ್ರದ ಜನರ ಮನ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೇಡಿಕೆಗಳು ಇರುವ ಕ್ಷೇತ್ರವೆಂದರೆ ಅದು ಬೈಂದೂರು. ವಿಪಕ್ಷದಲ್ಲಿ ಕೂತು ಜನಸೇವೆ ಮಾಡುವುದು ಗುರುರಾಜ ಶೆಟ್ಟಿ ಗಂಟಿ ಹೊಳೆ ಅವರ ಮುಂದೆ ಇರುವ ದೊಡ್ಡ ಸವಾಲು.