ಬೆಂಗಳೂರು: ಕಾಂಗ್ರೆಸ್ ನಾಯಕರು ಹಿಂಸಾಚಾರದ ಪ್ರವೃತ್ತಿಗೆ ಆಸ್ಪದ ಕೊಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel)ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿದ ತಕ್ಷಣ ರಾಜ್ಯದ ವಿವಿಧ ಕಡೆಗಳಲ್ಲಿ `ಹಿಂಸಾ ಗ್ಯಾರಂಟಿ ಸ್ಕೀಮ್’ ಅನ್ನು ಜಾರಿಗೆ ತಂದಿದೆ. ಹೊಸಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಕಾಂಗ್ರೆಸ್ ನಾಯಕರು ಇಂತಹ ಹಿಂಸಾಚಾರದ ಪ್ರವೃತ್ತಿಗೆ ಆಸ್ಪದ ಕೊಡಬಾರದು. ರಾಜ್ಯದ ವಿವಿಧ ಕಡೆಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗಿವೆ. ಇದನ್ನು ತಡೆಯಬೇಕು. ಪಾಕಿಸ್ತಾನದ ಧ್ವಜ ಹಾರಿಸುವುದು ದೇಶದ್ರೋಹದ ಚಟುವಟಿಕೆಯಾಗಿದೆ. ಇದನ್ನು ನಿಯಂತ್ರಿಸಬೇಕು. ಯಾವುದೇ ಕಾರಣಕ್ಕೂ ಇಂತಹ ಹಿಂಸಾಚಾರದ ದೇಶದ್ರೋಹಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ.
ಕಾಂಗ್ರೆಸ್ ಮುಖಂಡರು ತಮ್ಮೊಳಗಿನ ಭಿನ್ನಮತವನ್ನು ಬದಿಗಿಡಬೇಕು ಎಂದು ಹೇಳಿದರು. ತಾವು ಈಗಾಗಲೇ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು. ಹಿಂಸೆಯನ್ನು ಪ್ರಚೋದಿಸುವವರು ಮತ್ತು ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ನೀಡುವವರನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹ ಮಾಡಿದ್ದಾರೆ.