ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಬಹುಮತ ಬಂದ ಬೆನ್ನಲ್ಲೇ ವಿದ್ಯುತ್ ಬಿಲ್ (Electricity Bill) ಕಟ್ಟಲ್ಲ ಎಂದು ಬೆಸ್ಕಾಂ ಮೀಟರ್ ರೀಡರ್ಗೆ ಗ್ರಾಮಸ್ಥರು ಆವಾಜ್ ಹಾಕಿದ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಜಾಲಿಕಟ್ಟೆಯಲ್ಲಿ ಬೆಳಕಿಗೆ ಬಂದಿದೆ.
ಪ್ರತಿ ತಿಂಗಳಂತೆ ಈ ತಿಂಗಳ ವಿದ್ಯುತ್ ಬಿಲ್ ನೀಡಲು ಬೆಸ್ಕಾಂ ಮೀಟರ್ ರೀಡರ್ ಗ್ರಾಮಕ್ಕೆ ಧಾವಿಸಿದ್ದರು. ಈ ವೇಳೆ ಬೆಸ್ಕಾಂ ಮೀಟರ್ ರೀಡರ್ಗೆ ಗ್ರಾಮಸ್ಥರು ತಡೆದು, ಆವಾಜ್ ಹಾಕಿದ್ದಾರೆ. ಈ ಬಾರಿ ನಾವು ವಿದ್ಯುತ್ ಬಿಲ್ ಕಟ್ಟಲ್ಲ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ. ಶೀಘ್ರದಲ್ಲೇ ಸರ್ಕಾರ ಅಧಿಕಾರ ಚಲಾಯಿಸಲಿದೆ. ಹೀಗಾಗಿ ಮೀಟರ್ ರೀಡಿಂಗ್ ಬರೆಯಬೇಡ ಎಂದಿರುವ ವೀಡಿಯೋ ವೈರಲ್ ಎಲ್ಲೆಡೆ ಆಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯುತ್ ಫ್ರೀ ಎಂದು ಮೊದಲೇ ಕಾಂಗ್ರೆಸ್ ಘೋಷಿಸಿದೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆಯಲ್ಲ ಮತ್ಯಾಕೆ ನಾವು ಬಿಲ್ ಕಟ್ಟಬೇಕು ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಮೀಟರ್ ರೀಡರ್ ಮಾತನಾಡಿ, ಆದೇಶ ಬರುವವರೆಗೆ ಬಿಲ್ ಕಟ್ಟಬೇಕೆಂದಿದ್ದಾರೆ.
ಈ ವೇಳೆ ಗ್ರಾಮಸ್ಥರು, ನಾವು ಯಾವುದೇ ಕಾರಣಕ್ಕೂ ಬಿಲ್ ಪಾವತಿಸುವುದಿಲ್ಲ. ವಿದ್ಯುತ್ ಬಿಲ್ ಆದೇಶದ ಬಗ್ಗೆ ಕಾಂಗ್ರೆಸ್ನವರಿಗೆ ಕೇಳಿ ಎಂದು ಆವಾಜ್ ಹಾಕಿದ್ದಾರೆ. ಅಷ್ಟೇ ಅಲ್ಲದೇ ಬೆಸ್ಕಾಂ ಸಿಬ್ಬಂದಿ ಸಾಕಷ್ಟು ಮನವೊಲಿಸಿದರುವ ಸಹ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಸ್ಥಳದಿಂದ ವಾಪಸ್ ಆಗಿದ್ದಾರೆ.