ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Sivakumar) ಹೇಳಿದ್ದಾರೆ. ಸೋಮವಾರ ಬೆಂಗಳೂರಿನ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಕರೆಯ ಮೇರೆಗೆ ಸೋಮವಾರ ಸಂಜೆಯೇ ದೆಹಲಿಗೆ ತೆರಳಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆ ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ನನ್ನ ಆರೋಗ್ಯ ಈಗಲೂ ಸುಧಾರಿಸಿಲ್ಲ, ಆದರೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವುದೇ ನನ್ನ ಮೊದಲ ಆದ್ಯತೆಯಾಗಿದೆ.
ಈ ಹಿನ್ನೆಲೆ ಮಂಗಳವಾರ ಬೆಳಗ್ಗೆಯೇ ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಸಿಎಂ ಆಯ್ಕೆ ವಿಚಾರದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಬಯಸುವುದಿಲ್ಲ. ಸಿಎಂ ಆಯ್ಕೆಯನ್ನು ನಾನು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದೇನೆ. ನನಗೆ ಮುಖ್ಯವಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ. 135 ಎಂಬುದು ಸಂಖ್ಯೆ ಮಾತ್ರ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ.
ಒಂದಾಗಿದ್ದೇವೆ ಮತ್ತು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು. ರಾಜಕೀಯದಲ್ಲಿ ನಾವು ಗೆದ್ದಿದ್ದೇವಾ ಅಥವಾ ಸೋತಿದ್ದೇವಾ ಎಂಬುದು ಮುಖ್ಯ. ಹೇಗೆ ಗೆದ್ದಿದ್ದೇವೆ ಎಂಬುದು ಮುಖ್ಯವಲ್ಲ. ಇವತ್ತು ದೇವರ ದಯೆಯಿಂದ ನಮಗೆ ಉತ್ತಮ ಸಂಖ್ಯೆ ಬಂದಿದೆ. ಜನ ನಮ್ಮನ್ನು ನಂಬಿದ್ದಾರೆ. ಜನರ ನಂಬಿಕೆಯಿಂದ ನಾವು ಒಂದಾಗಿದ್ದೇವೆ. ಅಲ್ಲದೇ ಇವತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು ಹೇಳಿಕೆಯನ್ನು ನೀಡಿರುವುದು ನನಗೆ ತುಂಬಾ ಖುಷಿಯಾಗಿದೆ. ನಾನು ಕೆಲವೊಂದು ಕ್ಲಿಪ್ಪಿಂಗ್ಸ್ ನೋಡಿದೆ. ಈ ರೀತಿಯ ಬೆಂಬಲ ಒಳ್ಳೆಯದು ಎಂದು ಹೇಳಿದರು.