ಕಾರವಾರ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress), ಬಿಜೆಪಿ (BJP) ಚುನಾವಣೆ ಸಂದರ್ಭದಲ್ಲಿ ಶುರುವಾದ ಜಗಳಗಳು ಫಲಿತಾಂಶ ಬಂದಮೇಲೂ ಮುಂದುವರಿದಿದೆ. ಬಿಜೆಪಿಯ ಸುನೀಲ್ ನಾಯ್ಕರನ್ನ ಕಾಂಗ್ರೆಸ್ನ ಮಂಕಾಳುವೈದ್ಯ ದೊಡ್ಡ ಅಂತರದಲ್ಲಿ ಸೋಲಿಸಿದ ನಂತರ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಒಳ ಜಗಳ ಇದೀಗ ಬೀದಿಗೆ ಬಂದಿದೆ.
ಜಿಲ್ಲೆಯ ಹೊನ್ನಾವರದ ಮೂರ್ಕಣಿ ಗ್ರಾಮದಲ್ಲಿ ಕಿಡಿಗೇಡಿಗಳು ಬಿಜೆಪಿ ಕಾರ್ಯಕರ್ತ ಮಾರುತಿ ನಾಯ್ಕ ಎಂಬವರ ಎಲೆಕ್ಟ್ರಿಕ್ ಮಳಿಗೆಗೆ ಬೆಂಕಿ ಹಚ್ಚಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ನರಸಿಂಹ ಸಣ್ಣತಮ್ಮ ಎಂಬುವವರ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಪಟಾಕಿ ಕಿಡಿ ಕಾರಿನ ಶಡ್ಗೆ ಬೆಂಕಿ ಹೊತ್ತಿಕೊಂಡು ಕಾರು ಅಲ್ಪಪ್ರಮಾಣದಲ್ಲಿ ಸುಟ್ಟಿದ್ದು ಬೆಂಕಿ ನಂದಿಸಲಾಗಿದೆ. ಆದ್ರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಇನ್ನೂ ಮುರುಡೇಶ್ವರ ವ್ಯಾಪ್ತಿಯ ಶಿರಾಲಿಯ ಬಿಜೆಪಿ ಮುಖಂಡ ರಾಮಚಂದ್ರ ನಾಯ್ಕ ಎಂಬವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಹಲ್ಲೆ ಮಾಡಿದ್ದು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸದ್ಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಚುನಾವಣಾ ಫಲಿತಾಂಶದ ನಂತರ ಹಲ್ಲೆ, ಗಲಾಟೆಗೆ ತಿರುಗಿದ್ದು ಮುಂದಿನ ದಿನದಲ್ಲಿ ಯಾವ ಹಂತ ತಲುಪಲಿದೆಯೋ ಎಂಬ ಆತಂಕ ಸಾಮಾನ್ಯ ಜನರನ್ನ ಕಾಡುವಂತೆ ಮಾಡಿದೆ.