ಲಾಹೋರ್: ದೇಶದ್ರೋಹ ಆರೋಪ ಹೊರಿಸಿ ನನ್ನನ್ನು ಮುಂದಿನ 10 ವರ್ಷಗಳ ಕಾಲ ಜೈಲಿನಲ್ಲಿರಿಸಲು ಸೇನೆಯು ತಂತ್ರ ರೂಪಿಸಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ.
ಮೋಸಗಾರರ ಷಡ್ಯಂತ್ರಗಳ ವಿರುದ್ಧ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುವುದುಆಗಿ ಖಾನ್ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅವರಿಗೆ ಈಚೆಗೆ ಜಾಮೀನು ನೀಡಿದ್ದ ಇಸ್ಲಾಮಾಬಾದ್ ಹೈಕೋರ್ಟ್, ಸೋಮವಾರ ಲಾಹೋರ್ ಹೈಕೋರ್ಟ್ಗೆ ಹಾಜರಾಗಲು ಸೂಚಿಸಿತ್ತು. ಅದರಂತೆ ಅವರು ಕೋರ್ಟ್ಗೆ ಹಾಜರಾಗಿದ್ದಾರೆ.
‘ಈಗ ಸಂಪೂರ್ಣ ಲಂಡನ್ ತಂತ್ರ ಬಹಿರಂಗಗೊಂಡಿದೆ. ನಾನು ಜೈಲಿನೊಳಗೆ ಇರುವಾಗ ಹಿಂಸಾಚಾರ ನೆಪದಲ್ಲಿ ಅವರು ನ್ಯಾಯಾಧೀಶರ, ತೀರ್ಪುಗಾರರ ಮತ್ತು ದಂಡನೆ ವಿಧಿಸು ವವರ ಪಾತ್ರ ನಿರ್ವಹಿಸಿದ್ದಾರೆ. ಬುಶ್ರಾ (ಇಮ್ರಾನ್ ಖಾನ್ ಪತ್ನಿ) ಅವರನ್ನು ಜೈಲಿಗೆ ಹಾಕಿ ನನಗೆ ಹಿಂಸೆ ನೀಡಲು ಈಗ ತಂತ್ರ ಹೆಣೆಯಲಾಗುತ್ತಿದೆ’ ಎಂದು ಇಮ್ರಾನ್ ಹೇಳಿದ್ದಾರೆ.
ಲಾಹೋರ್ನಲ್ಲಿರುವ ತಮ್ಮ ನಿವಾಸದಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡರ ಸಭೆ ನಡೆಸಿದ ಬಳಿಕ ಖಾನ್ ಅವರು ಟ್ವೀಟ್ ಮಾಡಿದ್ದಾರೆ.
ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಇಮ್ರಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ನಡೆಸುವುದಾಗಿ ನ್ಯಾಯಾಲಯ ಹೇಳಿದೆ.