ಖ್ಯಾತ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೆ ಕರ್ನಾಟಕ ಸರಕಾರ 2018ರಲ್ಲಿ ಡಾ. ರಾಜ್ ಕುಮಾರ್ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ ಪ್ರಶಸ್ತಿ ಘೋಷಣೆಯಾಗಿ ಐದು ವರ್ಷ ಕಳೆದರೂ, ಇದುವರೆಗೂ ಪ್ರಶಸ್ತಿ ಪ್ರದಾನ ಮಾಡಿಲ್ಲ. ಈ ಕುರಿತು ಶ್ರೀನಿವಾಸ್ ಮೂರ್ತಿ ಬೇಸರ ಹೊರ ಹಾಕಿದ್ದಾರೆ.
‘ಪ್ರಶಸ್ತಿಯನ್ನು ಇದುವರೆಗೂ ಕೊಟ್ಟಿಲ್ಲ. 2017ರ ಕಾರ್ಯಕ್ರಮ ಮಾಡಿದ್ದೇ ಕೊನೆ. ಆ ನಂತರದ ವರ್ಷಗಳ ಪ್ರಶಸ್ತಿಗಳ ಘೋಷಣೆ ಮಾಡಿದ್ದರೂ, ಇನ್ನೂ ಸಮಾರಂಭ ಮಾಡಿ ಪ್ರಶಸ್ತಿ ಕೊಟ್ಟಿಲ್ಲ. ಡಾ. ರಾಜ್ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು. ಆದರೆ, ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ. ಯಾರನ್ನು ಕೇಳುವುದು?’ ಎಂದು ಪ್ರಶ್ನೆ ಮಾಡಿದ್ದಾರೆ.
ಶ್ರೀನಿವಾಸಮೂರ್ತಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 50 ವರ್ಷಗಳಾಗಿವೆ. ಅವರ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಹೇಮಾವತಿ ಚಿತ್ರದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಯೋಗಾನರಸಿಂಹ ಅವರ ನಾಟಕದ ಕಂಪೆನಿಯಲ್ಲಿ ಪಾತ್ರ ಮಾಡುತ್ತಿದ್ದರು. ನಂತರ ಅವರದ್ದೇ ಆದ ಜಿಕೆಎಸ್ ಕಲಾನಿಕೇತನ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪನೆ ಮಾಡಿ ‘ಬೇಡರ ಕಣ್ಣಪ್ಪ’, ‘ಸದಾರಮೆ, ‘ತರಕಾರಿ ಚೆನ್ನಿ’, ‘ಮುದುಕನ ಮದುವೆ’ ಮುಂತಾದ ನಾಟಕಗಳನ್ನು ಮಾಡಿಕೊಂಡು ಬಂದಿದ್ದಾರೆ.
ಶ್ರೀನಿವಾಸಮೂರ್ತಿ ಇದುವರೆಗೂ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 32 ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಕವಿರತ್ನ ಕಾಳಿದಾಸ’ ಚಿತ್ರದ ಭೋಜರಾಜನ ಪಾತ್ರ ಮಾತ್ರ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದುಬಿಟ್ಟಿದೆ. ಮೂರ್ತಿಗಳಿಗೆ ಕನ್ನಡ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ, ಅವರನ್ನು ಚಿತ್ರರಂಗ ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವಿದೆಯಾದರೂ, ತಮಗೆ ಎಷ್ಟು ಸಿಕ್ಕಿದೆಯೋ ಅದೆಲ್ಲ ಕೀರ್ತಿಯನ್ನು ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಮತ್ತು ಡಾ. ರಾಜಕುಮಾರ್ ಸಹೋದರ ವರದಪ್ಪ ಅವರಿಗೆ ಸಲ್ಲಿಸಿದ್ದಾರೆ.