ಬೆಂಗಳೂರು : ರಾಸಾಯನಿಕ ಮುಕ್ತ ಮಾವು ಮತ್ತು ಹಲಸಿನ ಹಣ್ಣುಗಳ ಮೇಳಕ್ಕೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಸಿದ್ಧತೆ ನಡೆಸುತ್ತಿದ್ದು, ಮೇ ಅಂತ್ಯದ ವೇಳೆಗೆ ಲಾಲ್ಬಾಗ್ನಲ್ಲಿ ಮೇಳ ನಡೆಸಲಾಗುತ್ತದೆ.
ಘಮ ಘಮಿಸುವ ಬಾದಾಮಿ, ರಸಪುರಿ, ಸಿಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ ಸೇರಿದಂತೆ ನಾನಾ ತಳಿಯ ಹಣ್ಣುಗಳು ಮಾವು ಪ್ರಿಯರನ್ನು ತಣಿಸಲು ಮೇಳಕ್ಕೆ ಆಗಮಿಸಲು ಸಜ್ಜಾಗುತ್ತಿವೆ. ಜತೆಯಲ್ಲಿಸಾಂಪ್ರದಾಯಿಕ ಹಾಗೂ ಸಂಶೋಧನಾ ತಳಿಯ ನಾನಾ ಗಾತ್ರದ ಹಲಸು ಕೂಡ ಮೇಳಕ್ಕೆ ಬರಲು ಸಿದ್ಧವಾಗಿವೆ. ಇದರೊಂದಿಗೆ ಉಪ್ಪಿನಕಾಯಿ ಸೇರಿದಂತೆ ಮಾವಿನಿಂದ ತಯಾರಿಸಿದ ನಾನಾ ಪದಾರ್ಥಗಳನ್ನೂ ಮಾರಾಟ ಮಾಡಲಾಗುತ್ತದೆ.
ಪ್ರತಿ ವರ್ಷದಂತೆ ಈ ಬಾರಿಯೂ ಹಣ್ಣುಗಳ ರಾಜ ಮಾವು ಹಾಗೂ ಹಲಸು ಮೇಳವನ್ನು ಲಾಲ್ಬಾಗ್ನಲ್ಲಿ ಹದಿನೈದು ದಿನಗಳ ಕಾಲ ಆಯೋಜಿಸಲಾಗುತ್ತದೆ. ರೈತರಿಂದ ನೇರವಾಗಿ ತಾಜಾ ಹಾಗೂ ಗುಣಮಟ್ಟದ ಹಣ್ಣುಗಳನ್ನು ಖರೀದಿಸಲು ಗ್ರಾಹಕರಿಗೆ ನೆರವಾಗುವುದು, ರೈತರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ಮಾರಾಟಕ್ಕೆ ನೆರವು ಕಲ್ಪಿಸುವುದು ಮೇಳದ ಉದ್ದೇಶ.
ರಾಜ್ಯದಲ್ಲಿಸುಮಾರು 14-15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿದ್ದುದು, ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಅರ್ಧದಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಿಯೇ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಹೆಚ್ಚಳವಾಗಿದೆ. ಆದರೆ, ಮೇಳದಲ್ಲಿ ರೈತರೇ ಮಾರುವುದರಿಂದ ನಿಗದಿತ ಹಾಗೂ ಕಡಿಮೆ ದರಕ್ಕೆ ಲಭ್ಯವಾಗಲಿದೆ.
ಈ ಬಾರಿ ಮೇಳದ ಮೂಲಕ ಒಂದು ಸಾವಿರ ಟನ್ ಮಾವಿನ ಹಣ್ಣು, ಸುಮಾರು 800 ಟನ್ ಹಲಸಿನ ಹಣ್ಣನ್ನು ಮಾರಾಟ ಮಾಡಲು ನಿಗಮ ನಿರ್ಧರಿಸಿದೆ. ಇತರೆ ಸಾರ್ವಜನಿಕ ಸ್ಥಳಗಳಲ್ಲೂಮಾವು ಮಾರಾಟ ಮೇಳ ನಡೆಸುವ ಆಲೋಚನೆಯನ್ನು ನಿಗಮ ಹೊಂದಿದೆ.
ಈ ಬಾರಿ ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರದಲ್ಲಿಮಾವು-ಹಲಸು ಮೇಳ ನಡೆಸಲಾಗುವುದು. ಮಧ್ಯವರ್ತಿಗಳ ಹಾವಳಿಯಿಲ್ಲದೆ, ರಾಸಾಯನಿಕ ಮುಕ್ತ ಮಾವನ್ನೇ ಮಾರಲಾಗುವುದು. ಜತೆಗೆ ಗ್ರಾಹಕರಿಗೆ ರಿಯಾಯಿತಿ ದರದಲ್ಲಿಗುಣಮಟ್ಟದ ಹಣ್ಣುಗಳನ್ನು ಪೂರೈಸಲಾಗುವುದು ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಹೇಳಿದ್ದಾರೆ.