ಮ್ಯಾನ್ಮಾರ್ನಲ್ಲಿ ಆರಂಭವಾಗಿರುವ ಮೋಕಾ ಚಂಡಮಾರುತದ ಅಬ್ಬರ ಇನ್ನೂ ನಿಂತಿಲ್ಲ. ಇದುವರೆಗೂ ಘಟನೆಯಲ್ಲಿ 81 ಮಂದಿ ಬಲಿಯಾಗಿದ್ದು 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆಯ ಭಾಗಗಳು ಸಹ ಪ್ರವಾಹಕ್ಕೆ ಒಳಗಾಗಿದ್ದು, ಗಂಟೆಗೆ 130 ಮೈಲುಗಳಷ್ಟು ವೇಗವಾಗಿ ಗಾಳಿ ಬೀಸಿತ್ತು. ಬುಮಾ ಮತ್ತು ಸಮೀಪದ ಖೌಂಗ್ ಡೋಕ್ ಗ್ರಾಮಗಳಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ರಾಖೈನ್ನ ರಾಜಧಾನಿ ಸಿಟ್ವೆಯ ಉತ್ತರದಲ್ಲಿರುವ ರಾಥೆಡಾಂಗ್ ಟೌನ್ಶಿಪ್ನ ಹಳ್ಳಿಯಲ್ಲಿ ಧಾರ್ಮಿಕ ಕಟ್ಟಡವೊಂದು ಕುಸಿದು 13 ಜನರು ಸಾವನ್ನಪ್ಪಿದ್ದಾರೆ ಮತ್ತು ಪಕ್ಕದ ಹಳ್ಳಿಯಲ್ಲಿ ಕಟ್ಟಡವೊಂದು ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸಿಟ್ವೆ ಸಮೀಪದ ಬು ಮಾ ಗ್ರಾಮದ ಮುಖ್ಯಸ್ಥ ಕಾರ್ಲೋ ಹೇಳಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮೋಕಾ ಚಂಡಮಾರುತ ಮ್ಯಾನ್ಮಾರ್ ಪಶ್ಚಿಮ ಭಾಗದ ಕರಾವಳಿ ಹಾಗೂ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ಮತ್ತೊಂದೆಡೆ ಬಾಂಗ್ಲಾ-ಮ್ಯಾನ್ಮಾರ್ಗೆ ಅಪ್ಪಳಿಸಿರುವ ಮೋಚಾ, ಭಾರತದ ಮಿಜೋರಾಂನಲ್ಲಿಯೂ ತೀವ್ರತರದ ಪರಿಣಾಮ ಉಂಟು ಮಾಡಿದೆ. 236ಕ್ಕೂ ಅಧಿಕ ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ.