ಗದಗ :ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಹುಲಿಗೆಮ್ಮ ದೇವಿಯ ಜಾತ್ರೆಯು ಅದ್ಧೂರಿಯಾಗಿ ನೆರವೇರಿತು. ಪ್ರತಿವರ್ಷ ಆಗಿಹುಣ್ಣಿಮೆ ಬಳಿಕ 9 ನೇ ದಿನಕ್ಕೆ ಶ್ರೀ ಆದಿಶಕ್ತಿ ಹುಲಿಗೆಮ್ಮ ದೇವಿ ಜಾತ್ರೆಯನ್ನ ಮಾಡ್ತಾರೆ. ಮುಖ್ಯವಾಗಿ ಈ ಜಾತ್ರೆಯಲ್ಲಿ ಗ್ರಾಮದ ಯಾರೇ ಇರಲಿ, ಎಷ್ಟೇ ವರ್ಷದಿಂದ ಬೇರೆ ಊರಲ್ಲಿ ನೆಲೆಸಿರಲಿ ಜಾತ್ರೆಗೆ ಬಂದು ಹೋಗಲೇಬೇಕು ಎಂಬ ನಂಬಿಕೆಯ ಭಕ್ತಿ ಇವರಲ್ಲಿದೆ. ಹೀಗಾಗಿ ಗ್ರಾಮದ ಹೆಣ್ಮಕ್ಕಳು, ನೌಕರಸ್ಥರು, ಬೇರೆ ಊರಲ್ಲಿ ನೆಲೆಸಿರೋವ್ರು,
ಮದುವೆಯಾಗಿ ಗಂಡನ ಮನೆಗೆ ಹೋದವರು ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಹುಲಿಗೆಮ್ಮ ದೇವಿ ಭಕ್ತಾದಿಗಳು ಎಲ್ಲರೂ ಈ ಜಾತ್ರೆಗೆ ಬಂದು ಹೋಗ್ತಾರೆ. ಇನ್ನು ಶ್ರೀ ಆದಿಶಕ್ತಿ ಹುಲಿಗೆಮ್ಮ ದೇವಿ ಜಾತ್ರೆಯು ಪವಾಡಗಳಿಗೆ ಸಾಕ್ಷಿಯಾಗಿದೆ. ಬಾಳಿದಂಡಿಗೆ, ಅಗ್ನಿಕುಂಡ ಹಾಯುವುದು,
ಕುದಿಯುವ ಪಾಯಿಸವನ್ನ ಪೂಜಾರಿಗಳು ಕೈ ಹಾಕಿ ತೆಗೆದು ದೇವರಿಗೆ ನೈವೇದ್ಯ ಮಾಡುವಂತಹ ಪವಾಡಗಳು ನಡೆದು ಎಲ್ಲರ ಗಮನ ಸೆಳೆದಿವೆ. ವಿಶೇಷ ಅಂದ್ರೆ ಒಂದು ಮಣ್ಣಿನ ಗಡಿಗೆಯಲ್ಲಿ ಕುದಿಯುವ ಪಾಯಿಸವನ್ನ ಐದಾರು ಪೂಜಾರಿಗಳು ಕೈ ಹಾಕಿ ಅಲ್ಲಿಯೇ ದೂರದಿಂದ ದೇವರಿಗೆ ನೈವೇದ್ಯ ಮಾಡುವುದನ್ನ ಸಾವಿರಾರು ಜನ ಕಣ್ತುಂಬಿಕೊಂಡ್ರು. ಜೊತೆಗೆ ತಾವು ಬೇಡಿಕೊಂಡಿದ್ದನ್ನ ವರ್ಷ ಪೂರ್ಣಗೊಳ್ಳುವುದರಲ್ಲಿ ದೇವಿ ನೆರವೇರಿಸ್ತಾಳೆ ಎಂಬ ನಂಬಿಕೆ ಭಕ್ತಾದಿಗಳದ್ದಾಗಿದೆ.