ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಶುರು ಮಾಡಿದ್ದ ‘ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ’ಗೆ ಗ್ರಹಣ ಹಿಡಿದಿದೆ. ಬಿಬಿಎಂಪಿಯ 8 ವಲಯಗಳಲ್ಲೂ ಜಾರಿಗೆ ತರಲು ಉದ್ದೇಶಿಸಿದ್ದ ಪಾವತಿ ಪಾರ್ಕಿಂಗ್ ಯೋಜನೆಗೂ ಮುಹೂರ್ತ ಕೂಡಿ ಬಂದಿಲ್ಲ!
ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ವಾಣಿಜ್ಯ ಪ್ರದೇಶಗಳಾದ ಎಂ.ಜಿ.ರಸ್ತೆ, ಕನ್ನಿಂಗ್ಹ್ಯಾಂ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರಬಾ ರಸ್ತೆ, ರಿಚ್ಮಂಡ್ ರಸ್ತೆ, ಮ್ಯೂಸಿಯಂ ರಸ್ತೆ, ವಿಠಲ್ಮಲ್ಯ ರಸ್ತೆ ಸೇರಿದಂತೆ 85 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಈ ಸಂಬಂಧ ‘ಸೆಂಟ್ರಲ್ ಪಾರ್ಕಿಂಗ್ ಸವೀರ್ಸ್’ ಎಂಬ ಸಂಸ್ಥೆಯೊಂದಿಗೆ ಪಾಲಿಕೆಯು 10 ವರ್ಷಗಳ ಅವಧಿಗೆ ಒಡಂಬಡಿಕೆ ಸಹ ಮಾಡಿಕೊಂಡಿದೆ. ಇದರಿಂದ ವಾರ್ಷಿಕ 31.56 ಕೋಟಿ ರೂ. ವರಮಾನ ನಿರೀಕ್ಷಿಸಲಾಗಿತ್ತು.
ಸೆಂಟ್ರಲ್ ಪಾರ್ಕಿಂಗ್ ಸವೀರ್ಸ್ ಸಂಸ್ಥೆಯು 2020ರ ಸೆಪ್ಟಂಬರ್ 19ರಂದು ಎಂ.ಜಿ.ರಸ್ತೆ ಸೇರಿದಂತೆ 10 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದು, ಶುಲ್ಕ ವಸೂಲಿ ಆರಂಭಿಸಿತು. ನಗರದ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ಮೂರು ವಿಭಾಗಗಳನ್ನಾಗಿ ಮಾಡಿ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿತ್ತು. ಇದಕ್ಕಾಗಿಯೇ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ‘ಎ’ ವಿಭಾಗದಲ್ಲಿ ಕಾರುಗಳಿಗೆ 30, ದ್ವಿಚಕ್ರ ವಾಹನಗಳಿಗೆ 15 ರೂ., ‘ಬಿ’ ವಿಭಾಗದಲ್ಲಿ ಕ್ರಮವಾಗಿ 20 ರೂ., 10 ರೂ. ಹಾಗೂ ‘ಸಿ’ ವಿಭಾಗದಲ್ಲಿ10 ರೂ. ಮತ್ತು 5 ರೂ. ನಿಗದಿ ಮಾಡಲಾಗಿತ್ತು.
ಆದರೆ, ಈವರೆಗೆ 10 ರಸ್ತೆಗಳನ್ನು ಹೊರತುಪಡಿಸಿ, ಬೇರೆಲ್ಲೂ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿಲ್ಲ. ಉಳಿದ 75 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಪದ್ಧತಿ ಶುರುವಿಗೆ ಸಂಸ್ಥೆಯು ಆಸಕ್ತಿಯನ್ನೂ ತೋರುತ್ತಿಲ್ಲ. ಸದ್ಯ ಜಾರಿಗೊಳಿಸಿರುವ ಕಡೆಗಳಲ್ಲೂಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅಲ್ಲದೆ, ಇದುವರೆಗೆ ನಯಾಪೈಸೆಯನ್ನೂ ಪಾಲಿಕೆಗೆ ಪಾವತಿ ಮಾಡಿಲ್ಲ. ಇಷ್ಟಾದರೂ, ಪಾಲಿಕೆ ಅಧಿಕಾರಿಗಳು ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಅನುವು ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಿಯಮ ಗಾಳಿಗೆ; ವಾಹನಗಳು ಬೀದಿಗೆ
ನಗರದ ಪ್ರತಿಯೊಂದು ಕಟ್ಟಡದಲ್ಲಿ ವಾಹನಗಳ ನಿಲುಗಡೆಗೆ ಇಂತಿಷ್ಟು ಜಾಗ ಮೀಸಲಿಡಲೇಬೇಕೆಂಬ ನಿಯಮವಿದೆ. ಆದರೆ, ಇದು ಕಾಗದದಲ್ಲೇ ಉಳಿದಿದ್ದು, ಬಹುತೇಕ ಕಟ್ಟಡಗಳಲ್ಲಿ ಪಾರ್ಕಿಂಗ್ ಸೌಲಭ್ಯವೇ ಇಲ್ಲ. ಇದರಿಂದಾಗಿ ವಾಹನಗಳು ವಿಶ್ರಾಂತಿಗಾಗಿ ರಸ್ತೆಗಳನ್ನೇ ಆಶ್ರಯಿಸುವಂತಾಗಿದೆ. ಮಹಾನಗರದಲ್ಲಿ ಒಂದು ಕೋಟಿಗಿಂತ ಹೆಚ್ಚು ವಾಹನಗಳಿದ್ದು, ನಿಲುಗಡೆಗೆ ಸೂಕ್ತ ತಾಣ ಇಲ್ಲದಂತಾಗಿದೆ.
ಕಟ್ಟಡ ಬೈಲಾದಂತೆ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕಿದೆ. ಆದರೆ, ನಗರದಲ್ಲಿನ ಸುಮಾರು 28 ಲಕ್ಷ ಸ್ವತ್ತುಗಳ ಪೈಕಿ ಶೇ.80ರಷ್ಟು ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹಲವು ಪ್ರದೇಶಗಳಲ್ಲಿ ವಾಹನಗಳು ಫುಟ್ಫಾತ್ ಮತ್ತು ರಸ್ತೆಯ ಅರ್ಧ ಭಾಗವನ್ನು ನುಂಗಿ ಹಾಕಿವೆ. ಇಕ್ಕಟ್ಟಾದ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪಾದಚಾರಿಗಳ ಓಡಾಟಕ್ಕೂ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ