ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಿ ದೊಡ್ಡ ವ್ಯಕ್ತಿ ಮಾಡುತ್ತೇವೆ ಅಂದರು. ಇದನ್ನು ಕೇಳಿಸಿಕೊಂಡ ಕೆಲವರು ನನಗೆ ಬಗಣಿಗೂಟ ಇಟ್ಟರು ಎಂದು ಮಾಜಿ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಇವತ್ತಿಂದ ನಿಮ್ಮ ಪೆನ್ನು ಪೇಪರ್ ಕೆಲಸ ಮಾಡಲಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕಿತ್ತು ಹಾಕಲಿ ಎಂದು ಚಾಮರಾಜನಗರ ಕ್ಷೇತ್ರ ಸೋಲಿನ ಕುರಿತು ಸೋಮಣ್ಣ ಪರೋಕ್ಷವಾಗಿ ಒಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು.
ಕ್ಷೇತ್ರಕ್ಕೆ ಅವನು ಮೊದಲು ಬಂದಾಗಲೇ ಒಳಕ್ಕೆ ಬಿಡಬಾರದಿತ್ತು. ಮಠಗಳಿಗೆ ಅನುದಾನ ನೀಡಿ ಅದರಲ್ಲೇ ಕಮಿಷನ್ ಪಡೆದ. ನನ್ನ ವಿರುದ್ಧ ಜಾತಿ ಎತ್ತಿಕಟ್ಟಿದ, ನನ್ನ ಮಗ ಇಲ್ಲಿಗೆ ಬರುತ್ತಾನೆ ಎಂದು ಕಥೆ ಕಟ್ಟಿದ. ನನ್ನ ವಿರುದ್ಧ ಅಪಪ್ರಚಾರ ಮಾಡಿದ. ಅವನ ಮಾತು ಕೇಳಿಕೊಂಡು ನನ್ನ ವಿರುದ್ಧ ಕೆಲವರು ಕುತಂತ್ರ ಮಾಡಿದರು. ಅವನಿಗೆ ಯಾರು ಹೇಳಿ ಕೊಟ್ಟರು ಎಂದು ನನಗೆ ಗೊತ್ತು. ಯಥಾರಾಜ ತಥ ಪ್ರಜೆ ಎಂದರು.
ನೀವೆಲ್ಲಾ ಬೆಂಗಳೂರಿಗೆ ಹೋಗಿ ಪಕ್ಷಕ್ಕೆ ದೂರು ಕೊಟ್ಟರೂ ಏನು ಪ್ರಯೋಜನವಿಲ್ಲ. ನಾನು ಕಾಂಗ್ರೆಸ್ನಲ್ಲಿ ಇದ್ದಿದ್ದಾಗ ನನ್ನ ಬೆಲೆ ಏನೆಂದು ಗೊತ್ತಾ, ಈಗಲೂ ನಾನು ಕಾಂಗ್ರೆಸ್ನಲ್ಲಿದ್ದರೆ ಹೇಗಿರುತ್ತಿದ್ದೆ ಗೊತ್ತಾ ಎಂದರು. ನಮ್ಮ ಸಮಾಜದವರು ಬೆಂಗಳೂರಿನಲ್ಲಿ ಕುಳಿತು ಆಟವಾಡಿಸುತ್ತಿದ್ದಾರೆ. ಇಲ್ಲಿಗೆ ಒಬ್ಬ ಬಂದು ಆಟವಾಡುತ್ತಿದ್ದಾನೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.