ಚಿತ್ರದುರ್ಗ: 2023ರ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಯಶಸ್ಸು ತಂದುಕೊಟ್ಟಿದೆ. ಚಾಮರಾಜನಗರದಿಂದ ಆರಂಭಗೊಂಡ ಯಾತ್ರೆ ಜಮ್ಮು ಕಾಶ್ಮೀರದಲ್ಲಿ ಸಾಗಿತು. ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಸಾಗಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ರಾಜ್ಯದಲ್ಲಿ ಸುಮಾರು 21 ದಿನಗಳ ಕಾಲ ಸಂಚರಿಸಿತು. ಸೆಪ್ಟೆಂಬರ್ 31, 2022ರಿಂದ ಆರಂಭವಾದ ಯಾತ್ರೆ ಅಕ್ಟೋಬರ್ 19, 2022ರವರೆಗೆ ರಾಜ್ಯದ ಒಟ್ಟು ಏಳು ಜಿಲ್ಲೆಗಳನ್ನು ಒಳಗೊಂಡ 511 ಕಿಲೋಮೀಟರ್ ದೂರವನ್ನು ಪ್ರಯಾಣಿಸಿದರು. ಚಾಮರಾಜನಗರ ಜಿಲ್ಲೆಯಿಂದ ಯಾತ್ರೆ ಆರಂಭಿಸಿದ ಕೇಂದ್ರ ನಾಯಕ ರಾಹುಲ್, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿದರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗಡಿಭಾಗದ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಸಂಚರಿಸಿ, ಬಳ್ಳಾರಿ ಜಿಲ್ಲೆ ತಲುಪಿತ್ತು. ಈ ಯಾತ್ರೆ ಸಂಚರಿಸಿದ ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ ಸುಧಾಕರ್ ಅವರು ಸುಮಾರು 30322 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ ಅವರು ಹ್ಯಾಟ್ರಿಕ್ ಗೆಲುವು ಪಡೆದುಕೊಂಡರು. ಇನ್ನು ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷ ಸೇರಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್ ವೈ ಗೋಪಾಲಕೃಷ್ಣ ಅವರು ಪ್ರಚಂಡ ಜಯ ಸಾಧಿಸಿದರು. ಇದಲ್ಲದೆ ಭಾರತ್ ಜೋಡೋ ಯಾತ್ರೆ ಸಂಚಾರಿಸಿದ ಅಕ್ಕಪಕ್ಕದ ತಾಲ್ಲೂಕುಗಳಾದ ಹೊಸದುರ್ಗ, ಚಿತ್ರದುರ್ಗ ಸೇರಿದಂತೆ ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಕೊರಟಗೆರೆ, ಕುಣಿಗಲ್ ಮತ್ತು ಜಗಳೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದೆ.