ವಿವಾದದ ನಡುವೆಯೂ ತೆರೆಗೆ ಬಂದ ದಿ ಕೇರಳ ಸ್ಟೋರಿ ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ನಲ್ಲೂ ಕಮಾಲ್ ಮಾಡುತ್ತಿದೆ. ಈ ಮಧ್ಯೆ ತಮಿಳಿನಲ್ಲೂ ಇಂಥದ್ದೇ ಮಾದರಿಯ ಚಿತ್ರವೊಂದು ರೆಡಿಯಾಗಿದ್ದು, ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಿದೆ. ಆ ಚಿತ್ರವನ್ನು ತಡೆಯಬೇಕು ಎಂದು ಮುಸ್ಲಿಂ ಸಮುದಾಯ ಆಗ್ರಹಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ತಮಿಳಿನ ಫರ್ಹಾನಾ ಸಿನಿಮಾ ಮುಸ್ಲಿಂ ವಿರೋಧ ಧೋರಣೆಯನ್ನು ತೋರುತ್ತಿದೆ. ಹಾಗಾಗಿ ಮೂಲಭೂತವಾದಿಗಳು ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಈ ಚಿತ್ರ ಮುಸ್ಲಿಂ ಮಹಿಳೆಯ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದು ಇದೇ ಕಾರಣಕ್ಕೆ ಮುಸ್ಲಿಂ ಸಮುದಾಯ ಸಾಕಷ್ಟು ವಿರೋದ ಹುಟ್ಟುಹಾಕಿದೆ.
ಮುಸ್ಲಿಂ ಮಹಿಳೆಯೊಬ್ಬರು ಬಡತನದ ಕಾರಣದಿಂದಾಗಿ ಲೈಂಗಿಕತೆ ಕುರಿತಾಗಿ ಮಾತನಾಡುವ ಕಾಲ್ ಸೆಂಟರ್ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ವೃತ್ತಿಗೆ ಸಂಬಂಧಿಸಿದ ಸಂಕಟಗಳು ಏನು, ಬ್ಲಾಕ್ ಮೇಲರ್ ಒಬ್ಬನ ಕಿರುಕುಳದಿಂದ ಆಕೆ ಹೇಗೆ ಪಾರಾಗುತ್ತಾಳೆ ಹೀಗೆ ಕಥೆಯನ್ನು ಒಳಗೊಂಡಿದೆ. ಈ ಕಥೆಗೆ ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿವೆ.
ನಾವು ಯಾರ ಮನಸ್ಸಿಗೂ ನೋವನ್ನುಂಟು ಮಾಡಿಲ್ಲ. ಉತ್ತಮವಾದ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿದೆ. ಯಾರ ವಿರುದ್ಧವೂ ನಾವು ಕಥೆಯನ್ನು ಹೇಳಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಐಶ್ವರ್ಯ ರಾಜೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾವನ್ನು ನೆಲ್ಸನ್ ವೆಂಕಟೇಷನ್ ನಿರ್ದೇಶನ ಮಾಡಿದ್ದಾರೆ.