ಬೆಂಗಳೂರು: ಈರುಳ್ಳಿ ಬೆಲೆ ಏಕಾಏಕಿ ಕುಸಿತಕಂಡಿದ್ದು ಇದರಿಂದ ಈರುಳ್ಳಿ ಬೆಳಗಾರರು ಕಂಗಾಲಾಗಿದ್ದಾರೆ.
ಕಳೆದ ವಾರ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಿಂದ ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ರಾಜಧಾನಿಯ ಮಾರುಕಟ್ಟೆಗೆ ದಾಸ್ತಾನು ಬಂದಿದೆ. ನಗರದ ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ ಬರುತ್ತಿದೆ. ಹೀಗಾಗೀ ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.
ಸೀಸನ್ ಅಲ್ಲದ ಕಾರಣ ಕಳೆದ ಒಂದೆರಡು ತಿಂಗಳಿಂದ ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವಿಭಾಗದಲ್ಲಿ ವಹಿವಾಟು ಕುಸಿತವಾಗಿದೆ. ಏಕಾಏಕಿ ಸೋಮವಾರದಿಂದ ಇಲ್ಲಿಗೆ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು ಕಡಿಮೆ ಗುಣಮಟ್ಟದ ಹೆಚ್ಚು ಈರುಳ್ಳಿ ಬಂದಿರುವ ಕಾರಣಕ್ಕೆ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ.
ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 8-10 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿ ಬೆಲೆ 5-8 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 20 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿಗೆ 10-12 ರೂ. ಮಾತ್ರವೇ ಮಾರಾಟ ಮಾಡಲಾಗುತ್ತಿದೆ.
100 ರೂ.ಗೆ ಏಳು-ಎಂಟು ಕೇಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಮಳೆಯ ಕಾರಣದಿಂದಾಗಿ ಈರುಳ್ಳಿ ತೇವಾಂಶದಿಂದ ಕೊಳೆಯಬಹುದು ಎಂಬ ಭಯದಿಂದ ರೈತರು ಅತಿ ಕಡಿಮೆ ಬೆಲೆಗೆ ಈರುಳ್ಳಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.