ಬೆಂಗಳೂರು: ಚುನಾವಣಾ ಫಲಿತಾಂಶ ಪ್ರಕಟವಾಗಿ 5 ದಿನಗಳ ಬಳಿಕ ಕೊನೆಗೂ ಸಿಎಂ (CM) ಕುರ್ಚಿಯ ಕದನ ಅಂತ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) 2ನೇ ಬಾರಿಗೆ ಅಧಿಕಾರ ಸ್ವೀಕರಿಸಲು ಮುಂದಾಗಿದ್ದು, ಡಿಕೆ ಶಿವಕುಮಾರ್ (DK Shivakumar) ಉಪ ಮುಖ್ಯಮಂತ್ರಿಯಾಗಲು (DCM) ಒಪ್ಪಿಗೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದಲ್ಲೂ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಕಂಠೀರವ ಸ್ಟೇಡಿಯಂ ಬಳಿ ಸಿಎಂ ಸಿದ್ದರಾಮಯ್ಯ ಅವರ ಫ್ಲೆಕ್ಸ್ಗಳು ಈಗಾಗಲೇ ರಾರಾಜಿಸುತ್ತಿವೆ.
2ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಸಿದ್ದರಾಮಯ್ಯಗೆ ಶುಭಾಶಯಗಳು ಎಂದು ಫ್ಲೆಕ್ಸ್ಗಳಲ್ಲಿ ಬರೆಯಲಾಗಿದೆ. ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಸೇರಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ಬಳಿಕ ಸಿದ್ದರಾಮಯ್ಯನವರು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿ 5 ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದರು.