ಬೆಂಗಳೂರು: ತುಷಾರ್ ಗಿರಿನಾಥ್ ಅವಧಿಯಲ್ಲಿನ ಅಕ್ರಮಗಳ ಕುರಿತು ವಿಶೇಷ ತನಿಖೆ ನಡೆಯಲಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಮೇಶ್ ಬಾಬು(Ramesh Babu) ಮನವಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ತುಷಾರ್ ಗಿರಿನಾಥ್ (Tushar Girinath)ತಮ್ಮ ಅಧಿಕಾರದ ಅವಧಿಯಲ್ಲಿ ಕಾಮಗಾರಿಗಳ ಸಹಿತವಾಗಿ ಹಲವಾರು ಅಕ್ರಮಗಳಿಗೆ ಅವಕಾಶ ಕೊಟ್ಟಿರುವ ಆರೋಪವಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಚುನಾವಣಾ ಅಧಿಕಾರಿಯಾಗಿ ಚಿಲುಮೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿಯ ಖಾಸಗಿ ವಿವರಗಳನ್ನು ಸಂಗ್ರಹಿಸುವ ಅವಕಾಶ ನೀಡುವುದರ ಮೂಲಕ ಅಕ್ರಮ ಎಸಗಿದ ಆರೋಪ ಅವರ ಮೇಲಿದ್ದು,
ಇದೆಲ್ಲವನ್ನೂ ಮುಂದಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ರಮೇಶ್ಬಾಬು ಒತ್ತಾಯಿಸಿದರು. ಹೊಸ ಸರಕಾರ ಆಡಳಿತಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಲಿಕೆಗೆ ಸಂಬಂಧಪಟ್ಟಂತೆ ಇವರು ಯಾವುದೇ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳದಂತೆ ನಿರ್ದೇಶನ ನೀಡಿ. ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ವತಿಯಿಂದ ತನಿಖೆ ಕೈಗೊಳ್ಳಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಮೇಶ್ಬಾಬು ಆಗ್ರಹಿಸಿದರು.