ಲಖನೌ: ಮಂಗಳವಾರ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ 5 ರನ್ಗಳಿಂದ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಲಖನೌ ಸೂಪರ್ ಜಯಂಟ್ಸ್ ತಂಡ, ಐಪಿಎಲ್ ಪ್ಲೇಆಫ್ಗೆ ಇನ್ನಷ್ಟು ಸನಿಹವಾಯಿತು.
ಈ ಪಂದ್ಯದ ಸೋಲು ಮುಂಬೈ ಇಂಡಿಯನ್ಸ್ಗೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. ಈ ಪಂದ್ಯದಲ್ಲಿ ಗೆಲುವು ಪಡೆದಿದ್ದರೆ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶವಿತ್ತು. ಅಂದ ಹಾಗೆ ಮುಂಬೈ ಇಂಡಿಯನ್ಸ್ ತಂಡದ (-0.128) ರನ್ರೇಟ್ ಕಡಿಮೆ ಇದೆ. ಒಂದು ವೇಳೆ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಗೆಲುವು ಪಡೆದರೂ ಕಡಿಮೆ ರನ್ರೇಟ್ನಿಂದಾಗಿ ಮುಂಬೈಗೆ ಐಪಿಎಲ್ ಪ್ಲೇಆಫ್ ಹಾದಿ ಕಠಿಣವಾಗಲಿದೆ.
ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (+0.166) ಹಾಗೂ ಪಂಜಾಬ್ ಕಿಂಗ್ಸ್ (-0.268) ತಂಡಗಳು ತಮ್ಮ ಮುಂದಿನ ಎರಡೂ ಪಂದ್ಯಗಳಲ್ಲಿ ಗೆದ್ದರೆ ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆದ್ದರೂ ಅಂತಿಮ ನಾಲ್ಕರ ಹಂತದಿಂದ ಹೊರ ಬೀಳಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪ್ಲೇಆಫ್ ಸ್ಥಾನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗೆಲುವು ಪಡೆದರೆ, ಸಿಎಸ್ಕೆ ಮೊದಲನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ದೊಡ್ಡ ಅಂತರದಲ್ಲಿ ಗೆದ್ದರೂ ಸಿಎಸ್ಕೆ ಅಗ್ರ ಎರಡರಲ್ಲಿ ಸ್ಥಾನ ಪಡೆಯಲಿದೆ. ಒಂದು ವೇಳೆ ಕೊನೆಯ ಪಂದ್ಯದಲ್ಲಿ ಸೋತರೆ ಸಿಎಸ್ಕೆ ಪ್ಲೇಆಫ್ ನಿರ್ಧಾರ ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ.
ಆಡಿರುವ 12 ಪಂದ್ಯಗಳಲ್ಲಿ 12 ಅಂಕಗಳನ್ನು ಕಲೆ ಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಪ್ಲೇಆಫ್ ಹಾದಿ ಉತ್ತಮವಾಗಿದೆ. ಮುಂಬೈ ಸೋತಿರುವ ಹಿನ್ನೆಲೆಯಲ್ಲಿ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲು ಅವಕಾಶವಿದೆ. 15 ಅಂಕಗಳನ್ನು ಕಲೆ ಹಾಕಿರುವ ಸಿಎಸ್ಕೆ ಹಾಗೂ ಲಖನೌ ತಮ್ಮ-ತಮ್ಮ ಕೊನೆಯ ಪಂದ್ಯಗಳಲ್ಲಿ ಸೋತು, ಆರ್ಸಿಬಿ ಕೊನೆಯ ಎರಡು ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ.
ಒಂದು ವೇಳೆ ಆರ್ಸಿಬಿ ಮುಂದಿನ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋತರೂ ಬೆಂಗಳೂರು ತಂಡದ ಐಪಿಎಲ್ ಪ್ಲೇಆಫ್ ಹಾದಿ ಬಹುತೇಕ ಬಂದ್ ಆಗಲಿದೆ. ಆದ್ದರಿಂದ ಆರ್ಸಿಬಿ ಮುಂದಿನ ಎರಡೂ ಪಂದ್ಯಗಳಲ್ಲ ಗೆಲುವು ಪಡೆಯುವತ್ತ ಗಮನಹರಿಸಬೇಕಾಗುತ್ತದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಐಪಿಎಲ್ ಪ್ಲೇಆಫ್ ರೇಸ್ನಲ್ಲಿರುವ ಪಂಜಾಬ್ ಕಿಂಗ್ಸ್ಗೆ ಕೂಡ ಅತ್ಯುತ್ತಮ ಅವಕಾಶವಿದೆ. ಐಪಿಎಲ್ ಪ್ಲೇಆಫ್ಗೆ ಅರ್ಹತೆ ಪಡೆಯಬೇಕೆಂದರೆ ಪಂಜಾಬ್ ಕೂಡ ತನ್ನ ಕೊನೆಯ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜಯಂಂಟ್ಸ್ ತಂಡಗಳು ತಮ್ಮ-ತಮ್ಮ ಕೊನೆಯ ಪಂದ್ಯಗಳಲ್ಲಿ ಸೋಲು ಅನುಭವಿಸಿ, ಪಂಜಾಬ್ ಕಿಂಗ್ಸ್ ಕೊನೆಯ ಎರಡೂ ಪಂದ್ಯಗಳಲ್ಲಿ ಉತ್ತಮ ರನ್ರೇಟ್ನಲ್ಲಿ ಗೆದ್ದರೆ, ಮೊದಲನೇ ಕ್ವಾಲಿಫೈಯರ್ಗೆ ಪಂಜಾಬ್ ಕಿಂಗ್ಸ್ ಅರ್ಹತೆ ಪಡೆಯುವ ಸಾಧ್ಯತೆ ಇದೆ.
ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೂ ಇನ್ನೂ ಐಪಿಎಲ್ ಪ್ಲೇಆಫ್ಗೆ ಅರ್ಹತೆ ಪಡೆಯಲು ಕೊನಯದಾಗಿ ಒಂದೇ ಒಂದು ಅವಕಾಶವಿದೆ. ಈ ಎರಡೂ ತಂಡಗಳು ತಮ್ಮ-ತಮ್ಮ ಕೊನೆಯ ಪಂದ್ಯದಲ್ಲಿ ಗೆಲುವು ಪಡೆದರೂ, ಇವುಗಳ ಐಪಿಎಲ್ ಪ್ಲೇಆಫ್ ನಿರ್ಧಾರ ಮುಂಬೈ, ಬೆಂಗಳೂರು ಹಾಗೂ ಪಂಜಾಬ್ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿದೆ. ಆರ್ಸಿಬಿ, ಎಂಐ ಹಾಗೂ ಪಂಜಾಬ್ ತಂಡಗಳು 14 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿ, ಕೆಕೆಆರ್ ಹಾಗೂ ಆರ್ಆರ್ ದೊಡ್ಡ ಅಂತರದಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದರೆ, ಆಗ ರನ್ರೇಟ್ ಆಧಾರದ ಮೇಲೆ ಅಂಕಪಟ್ಟಿಯ ನಾಲ್ಕನೇ ಸ್ಥಾನಕ್ಕೆ ಈ ಎರಡೂ ತಂಡಗಳ ಪೈಕಿ ಒಂದು ತಂಡ ಅರ್ಹತೆ ಪಡೆಯಬಹದು. ಆದರೆ, ಇದು ಸುಲಭವಲ್ಲ.