ಹೊಸದಿಲ್ಲಿ: ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿಎಂ ರೇಸ್ನಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿಯಾಗಿ ನೇಮಕ ಆಗಿದ್ದಾರೆ. ಅದಲ್ಲದೇ ಮುಂದಿನ ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮುಂದುವರಿಯಲಿದ್ದಾರೆ.
ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿದರು. ಶನಿವಾರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಅವರು ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜೊತೆ ಡಿಕೆ ಶಿವಕುಮಾರ್ ಡಿಸಿಎಂ ಆಗಿ, ಕೆಲ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು, ಕರ್ನಾಟಕದಲ್ಲಿ ಅಭೂತ ಪೂರ್ವ ಗೆಲುವು ಸಾದಿಸಿದ್ದೇವೆ. ಈ ಗೆಲುವಿಗೆ ಪಕ್ಷದ ಎಲ್ಲ ನಾಯಕರ ಕೊಡುಗೆಯಿದೆ. ಎಐಸಿಸಿ ಅಧ್ಯಕ್ಷರು ಒಂದು ತಿಂಗಳು ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಬೀಡು ಬಿಟ್ಟು ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಪಾದಯಾತ್ರೆಯಿಂದ ಕಾರ್ಯಕರ್ತರಿಗೆ ಹುರುಪು ಬಂದಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದ ತಿಳಿಸ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮೂರು ವೀಕ್ಷಕರನ್ನ ನೇಮಿಸಲಾಗಿತ್ತು. ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ವೀಕ್ಷಕರು ವರದಿಯನ್ನ ಅಧ್ಯಕ್ಷರಿಗೆ ನೀಡಿದ್ದರು. ನಮ್ಮದು ಪ್ರಜಾಸತ್ತಾತ್ಮಕ ಪಕ್ಷ, ನಾವು ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರಲ್ಲ. ಕರ್ನಾಟಕದಲ್ಲಿ ಡೈನಾಮಿಕ್ ನಾಯಕರಿದ್ದಾರೆ. ಸಿದ್ದರಾಮಯ್ಯ ಅನುಭವಿ, ಹಿರಿಯ ರಾಜಕಾರಣಿ, ಉತ್ತಮ ಆಡಳಿತಗಾರರು ಹೌದು. ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರದ್ದು ದೊಡ್ಡ ಪಾತ್ರವಿದೆ. ಡಿಕೆ ಶಿವಕುಮಾರ್ ಪಕ್ಷ ಸಂಘಟಕರು, ಪಕ್ಷದಲ್ಲಿ ಕೆಡಾರ್ ತಯಾರು ಮಾಡುವಲ್ಲಿ ಅವರ ಪಾತ್ರ ದೊಡ್ದದಿದೆ ಎಂದರು.
ಡಿಕೆ ಶಿವಕುಮಾರ್,ಸಿದ್ದರಾಮಯ್ಯ ಇಬ್ಬರೂ ಪಕ್ಷದ ದೊಡ್ಡ ಆಸ್ತಿ, ಇಬ್ಬರಿಗೂ ಸಿಎಂ ಆಗಬೇಕೆಂಬ ಆಕಾಂಕ್ಷೆಯಿತ್ತು. ಸಹಜವಾಗಿಯೇ ಬಯಕೆ ಇತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಒನ್ ಟು ಒನ್ ಮಾತುಕತೆ ನಡೆಸಲಾಗಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಭಿಪ್ರಾಯ ಪಡೆದಿದ್ದೇವು. ಅಂತಿಮವಾಗಿ ಎಐಸಿಸಿ ಅಧ್ಯಕ್ಷರು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಕೆಸಿ ವೇಣುಗೋಪಾಲ್ ತಿಳಿಸಿದರು. ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಇಬ್ಬರು ನಾಯಕರು ನೀಡಲಿಲ್ಲ.