ಸಿಎಂ ಯಾರಾಗುತ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಡಿ. ಕೆ. ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ದಿಗ್ವಿಜಯ ಸಾಧಿಸಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಭಾಗ್ಯ ಸಿದ್ದರಾಮಯ್ಯ ಅವರಿಗೆ ಒಲಿದು ಬಂದಿದೆ. ಆದ್ರೆ, ಸಿದ್ದರಾಮಯ್ಯ ಅವರು ಕೂರುವ ಸಿಎಂ ಸೀಟಿನಲ್ಲಿ ಹೂವಿಗಿಂತಾ ಮುಳ್ಳುಗಳೇ ಜಾಸ್ತಿ ಇರುತ್ತಾ ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ. ಯಾಕಂದ್ರೆ ಕಾಂಗ್ರೆಸ್ ಪಕ್ಷ ಬರೋಬ್ಬರಿ 135 ಸ್ಥಾನ ಗಳಿಸಿದರೂ ಕೂಡಾ ಕಳೆದ ಬಾರಿಯಂತೆ ಈ ಬಾರಿ ಸಿದ್ದರಾಮಯ್ಯ ನಿರಾತಂಕವಾಗಿ 5 ವರ್ಷ ಪೂರ್ಣಾವಧಿ ಸಿಎಂ ಆಗಿ ಇರ್ತಾರಾ ಅನ್ನೋದೇ ದೊಡ್ಡ ಪ್ರಶ್ನೆ.. ಈ ಪ್ರಶ್ನೆ ಮೂಡಿದ್ದು ಏಕೆ? ಸಿದ್ದರಾಮಯ್ಯ ಮುಂದಿರೋ ಸವಾಲುಗಳೇನು? ಸಿಎಂ ಪಟ್ಟಕ್ಕೆ ಪೈಪೋಟಿ ನಡೆಸಿ ಇದೀಗ ಡಿಸಿಎಂ ಹುದ್ದೆಗೆ ತೃಪ್ತಿ ಪಟ್ಟಿರುವ ಡಿ. ಕೆ. ಶಿವಕುಮಾರ್ ಅವರಿಂದ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಸಹಕಾರ ಸಿಗುತ್ತಾ? ಸಿದ್ದು – ಡಿಕೆಶಿ ಕುಚಿಕುಗಳಾಗಿ ಸರ್ಕಾರ ನಡೆಸ್ತಾರಾ? ಈ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ:
ಸವಾಲು 1 – ಡಿಕೆಶಿ ಟೀಂ ಜೊತೆ ಉತ್ತಮ ಬಾಂಧವ್ಯ ಹೇಗೆ?
ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರಿಗೆ ಇರುವ ಅತಿ ದೊಡ್ಡ ಸವಾಲು ಡಿ. ಕೆ. ಶಿವಕುಮಾರ್ ಮತ್ತವರ ತಂಡ. ಪ್ರತಿಪಕ್ಷ ಬಿಜೆಪಿಗಿಂತಲೂ ಸಿದ್ದರಾಮಯ್ಯನವರಿಗೆ ಡಿಕೆಶಿಯೇ ದೊಡ್ಡ ಸವಾಲು ಆಗಬಹುದೇನೋ! ಸಂಪುಟ ರಚನೆಯಿಂದ ಹಿಡಿದು ಸರ್ಕಾರ ನಡೆಸುವಾಗ ಪ್ರತಿಯೊಂದು ನಿರ್ಧಾರ ಕೈಗೊಳ್ಳುವಾಗಲೂ ಡಿಕೆಶಿ ಮತ್ತವರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸಿದ್ದರಾಮಯ್ಯ ಸಾಗಬೇಕಾಗುತ್ತದೆ. ನಾವೆಲ್ಲರೂ ಕಾಂಗ್ರೆಸ್ ಟೀಂ, ಇಲ್ಲಿ ಸಿದ್ದು ಟೀಂ, ಡಿಕೆಶಿ ಟೀಂ ಅಂತಾ ಯಾವುದೂ ಇಲ್ಲ ಎಂದು ಮೇಲ್ನೋಟಕ್ಕೆ ಹೇಳಿದರೂ ಒಳಗೊಳಗೇ ಮುಸುಕಿನ ಗುದ್ದಾಟ ಇದ್ದೇ ಇರುತ್ತೆ. ಇನ್ನು, ಚುನಾವಣಾ ಪ್ರಚಾರದಲ್ಲಿ ಕುಚಿಕುಗಳಂತೆ ಇದ್ದ ಇಬ್ಬರೂ ನಾಯಕರೂ, ಸರ್ಕಾರದಲ್ಲೂ ದೋಸ್ತಿಗಳಾಗಿ ಮುಂದುವರೆಯಬೇಕಿದೆ. ಇಲ್ಲವಾದ್ರೆ, ರಾಜಸ್ಥಾನ ಕಾಂಗ್ರೆಸ್ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಕರ್ನಾಟಕದಲ್ಲೂ ಎದುರಾದರೆ ಅಚ್ಚರಿ ಏನಿಲ್ಲ! ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ಗೆ ತುಂಬಾ ಚನ್ನಾಗಿ ಗೊತ್ತಿದೆ. ಹೀಗಾಗಿ, ಸಿಎಂ ಆಯ್ಕೆಗೆ ನಾಲ್ಕು ದಿನ ತೆಗೆದುಕೊಂಡ ಕಾಂಗ್ರೆಸ್ ಹೈಕಮಾಂಡ್, ಅಳೆದೂ ತೂಗಿ ನಿರ್ಧಾರ ಕೈಗೊಂಡಿದೆ.
ಸವಾಲು 2 – ಸಂಪುಟ ರಚನೆ ಅತಿ ದೊಡ್ಡ ಸವಾಲು
ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಸಂಪುಟ ರಚನೆಯ ಸವಾಲನ್ನು ಎದುರಿಸಬೇಕಾಗಿದೆ. ಏಕೆಂದರೆ, ನಾಯಕರೇ ತುಂಬಿರುವ ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕಾರು ಬಾರಿ ಗೆದ್ದು ಶಾಸಕರಾದ ಹಿರಿ ತಲೆಗಳು ಸಾಕಷ್ಟಿವೆ. ಈ ಪೈಕಿ ಹಲವರು ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಅವರೆಲ್ಲರಿಗೂ ಮತ್ತೆ ಸಚಿವ ಸ್ಥಾನ ಕೊಡಬೇಕು. ಡಿ. ಕೆ. ಶಿವಕುಮಾರ್ ಅವರಿಗಂತೂ ಸಿಎಂ ನಂತರದ ಮಹತ್ವದ ಹುದ್ದೆಯಾದ ಡಿಸಿಎಂ ಪಟ್ಟ ಸಿಕ್ಕಿದೆ. ಇದರ ಜೊತೆಯಲ್ಲೇ ಡಿ. ಕೆ. ಶಿವಕುಮಾರ್ ಅವರಿಗೆ ಯಾವೆಲ್ಲಾ ಖಾತೆಗಳು ಸಿಗಬಹುದು ಅನ್ನೋ ಕುತೂಹಲವೂ ಇದೆ. ಇದಲ್ಲದೆ, ಸಂಪುಟ ರಚನೆ ವೇಳೆ ಪ್ರಾಂತ್ಯವಾರು ಸಮತೋಲನ ಕಾಯ್ದುಕೊಳ್ಳಬೇಕು, ಜಿಲ್ಲಾವಾರು ಸಚಿವ ಸ್ಥಾನ ಹಂಚಿಕೆ ಮಾಡಬೇಕು. ಎಲ್ಲಕ್ಕಿಂತಾ ಹೆಚ್ಚಾಗಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಬಣಕ್ಕೆ ಸೂಕ್ತವಾಗಿ ಸಚಿವ ಸ್ಥಾನ ಹಂಚಿಕೆ ಆಗಬೇಕು. ಈ ಹಂತದಲ್ಲಿ ಲಾಬಿಗಳು ಸಾಕಷ್ಟು ನಡೆಯುತ್ತವೆ. ಈ ಎಲ್ಲಾ ಒತ್ತಡಗಳನ್ನೂ ಸೂಕ್ತವಾಗಿ ನಿಭಾಯಿಸಿ, ಭಿನ್ನಮತ ಸೃಷ್ಟಿ ಆಗದಂತೆ ಸಚಿವ ಸ್ಥಾನ ಹಂಚಿಕೆ ಮಾಡಬೇಕಾದ ಗುರುತರ ಜವಾಬ್ದಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ.
ಸವಾಲು 3 – ಗ್ಯಾರಂಟಿಗಳ ಜಾರಿ ಹೇಗೆ?
ಚುನಾವಣಾ ಪ್ರಚಾರ ಅಖಾಡದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ನೀಡಿದ್ದ ಗ್ಯಾರಂಟಿಗಳೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಕಾಂಗ್ರೆಸ್ಗೆ ಬಹುಮತ ಬಂದ ಕೂಡಲೇ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು ಅಂತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಹಲವು ಬಾರಿ ಹೇಳಿದ್ದಾರೆ. ಹಾಗೆ ನೋಡಿದ್ರೆ ಗ್ಯಾರಂಟಿಗಳ ಜಾರಿ ಅಷ್ಟು ಸುಲಭವಲ್ಲ. ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಉಚಿತ ವಿದ್ಯುತ್ ಸೇರಿದಂತೆ ಹಲವು ಗ್ಯಾರಂಟಿಗಳ ಜಾರಿಗೆ ಪ್ರತಿ ವರ್ಷ 62 ಸಾವಿರ ಕೋಟಿ ರೂಪಾಯಿ ಬೇಕು ಅನ್ನೋ ಲೆಕ್ಕಾಚಾರವಿದೆ. ಆದ್ರೆ, ಕಾಂಗ್ರೆಸ್ ಪಕ್ಷ 40 ಸಾವಿರ ಕೋಟಿ ರೂಪಾಯಿ ಸಾಕು ಎನ್ನುತ್ತಿದೆ. ಇಷ್ಟೇ ಮೊತ್ತವನ್ನು ಗ್ಯಾರಂಟಿಗಳಿಗೆ ಎತ್ತಿಡೋಕೆ ಹೊರಟರೂ ಕೂಡಾ ರಾಜ್ಯದ ಬೊಕ್ಕಸಕ್ಕೆ ಹೊರೆ ಆಗೋದು ಗ್ಯಾರಂಟಿ. ಹೀಗಾಗಿ, ಎಲ್ಲ ಗ್ಯಾರಂಟಿಗಳನ್ನ ಸಂಪುಟ ಸಭೆಯಲ್ಲಿ ಒಟ್ಟಿಗೇ ಜಾರಿ ಮಾಡ್ತಾರಾ? ಅಥವಾ ಬಜೆಟ್ನಲ್ಲಿ ಕೆಲವು ಗ್ಯಾರಂಟಿಗಳನ್ನ ಮಾತ್ರ ಜಾರಿ ಮಾಡ್ತಾರಾ ಅನ್ನೋ ಪ್ರಶ್ನೆ ಇದೆ. 13 ಬಾರಿ ಬಜೆಟ್ ಮಂಡಿಸಿರುವ ದಾಖಲೆ ಹೊಂದಿರುವ ಸಿದ್ದರಾಮಯ್ಯ ಅವರು, ಚಾಣಾಕ್ಷ್ಯತೆಯಿಂದ ಈ ಸವಾಲನ್ನು ನಿಭಾಯಿಸಬಹುದು ಅನ್ನೋ ನಿರೀಕ್ಷೆ ಖಂಡಿತಾ ಇದೆ..
ಸವಾಲು 4 – ಖರ್ಗೆ, ಹೈಕಮಾಂಡ್ ಜೊತೆಗಿನ ಬಾಂಧವ್ಯ ಹೇಗೆ?
ರಾಜ್ಯದ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಇನ್ನು ಅಹಿಂದ ನಾಯಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ. ಈ ಹಂತದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯಗಿಂತಾ ಹೆಚ್ಚು ಆಪ್ತವಾಗಿದ್ದಾರೆ ಅನ್ನೋ ಮಾತುಗಳಿವೆ. ಇನ್ನು ಸೋನಿಯಾ ಗಾಂಧಿ ಅವರು ಶಿವಕುಮಾರ್ ಅವರನ್ನ ತಿಹಾರ್ ಜೈಲಿಗೇ ಹೋಗಿ ಭೇಟಿ ಮಾಡುವ ಮೂಲಕ ತಾವು ಡಿಕೆಶಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತೇವೆ ಅನ್ನೋ ಸಂದೇಶವನ್ನ ಬಹಳ ಹಿಂದೆಯೇ ರವಾನೆ ಮಾಡಿದ್ದಾರೆ. ಹೀಗಾಗಿ, ಖರ್ಗೆ ಹಾಗೂ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದುವ ಜೊತೆಯಲ್ಲೇ ದಿಲ್ಲಿ ದೊರೆಗಳ ಆಣತಿಯಂತೆ ಕುಣಿಯುತ್ತಿಲ್ಲ ಅನ್ನೋ ಸಂದೇಶವನ್ನ ರಾಜ್ಯದ ಜನರಿಗೆ ರವಾನಿಸುವ ನಾಜೂಕಿನ ಹೆಜ್ಜೆಗಳನ್ನೂ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡಬೇಕಿದೆ. ಒಂದು ವೇಳೆ ದಿಲ್ಲಿ ದೊರೆಗಳ ಆಣತಿಗೆ ತಕ್ಕಂತೆ ಸಿದ್ದರಾಮಯ್ಯ ಕುಣಿಯುತ್ತಾರೆ ಅನ್ನೋ ಸಂದೇಶ ರಾಜ್ಯದ ಜನರಿಗೆ ರವಾನೆಯಾದರೆ, ಕನ್ನಡದ ಅಸ್ಮಿತೆ, ಕನ್ನಡಿಗರ ನಾಯಕತ್ವದ ಪ್ರಶ್ನೆ ಬರುತ್ತದೆ. ಬಿಜೆಪಿ ರೀತಿಯಲ್ಲೇ ಕಾಂಗ್ರೆಸ್ ರಾಜ್ಯ ನಾಯಕರೂ ಕೂಡಾ ರಾಷ್ಟ್ರೀಯ ನಾಯಕರಿಗೆ ಶರಣಾಗುತ್ತಿದ್ದಾರೆ ಅನ್ನೋ ಸಂದೇಶ ರವಾನೆ ಆಗುವ ಅಪಾಯ ಇದೆ. ಎಲ್ಲಕ್ಕಿಂತಾ ಹೆಚ್ಚಾಗಿ ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರ ಇಮೇಜ್ಗೂ ಇದು ಸರಿ ಹೊಂದೋದಿಲ್ಲ.
ಸವಾಲು 5 – ಲೋಕಸಭಾ ಚುನಾವಣೆಯಲ್ಲಿ ಸಾಮರ್ಥ್ಯ ಪರೀಕ್ಷೆ!
ಯಾವುದೇ ರಾಜಕೀಯ ನಾಯಕನ ಸಾಮರ್ಥ್ಯ ಪ್ರದರ್ಶನ ಆಗೋದು ಚುನಾವಣೆಯಲ್ಲಿ.. ಮತದಾರರ ಮನ ಗೆಲ್ಲುವಲ್ಲಿ ಸಮರ್ಥನಾದರೆ ಮಾತ್ರ ಹುದ್ದೆ ಭದ್ರವಾಗುತ್ತೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರೆ, ಸಿದ್ದರಾಮಯ್ಯ ಅವರ ಸಿಎಂ ಹುದ್ದೆ ಇನ್ನಷ್ಟು ನಿರಾತಂಕ ಆಗುತ್ತದೆ. ಈಗಾಗಲೇ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಸಂಸದರಿದ್ದರೆ, ಕೇವಲ 1 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸಂಸದರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಳ ಆದರೆ, ಸಿದ್ದರಾಮಯ್ಯ ಅವರ ಸಿಎಂ ಇಮೇಜ್ಗೆ ಮತ್ತಷ್ಟು ಗರಿ ಮೂಡುತ್ತದೆ. ಸಿದ್ದರಾಮಯ್ಯ ತಮ್ಮ ಅಹಿಂದ ಮತ ಶಕ್ತಿಯನ್ನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಹರಿಸುವಲ್ಲಿ ಶಕ್ತರಾಗ್ತಾರಾ ಅನ್ನೋದೇ ಈಗಿರುವ ಅತಿ ದೊಡ್ಡ ಪ್ರಶ್ನೆ..
ಉತ್ತಮ ಆಡಳಿತಕ್ಕೆ ಸಿಗಲಿ ಮೊದಲ ಆದ್ಯತೆ..
ಭ್ರಷ್ಟಾಚಾರ, ಬೆಲೆ ಏರಿಕೆಗಳನ್ನು ನಾವು ಸಹಿಸೋದಿಲ್ಲ ಎಂದು ಚುನಾವಣೆಯಲ್ಲಿ ಮತದಾರ ಸ್ಪಷ್ಟ ಸಂದೇಶ ರವಾನಿಸಿದ್ದಾನೆ. ಹೀಗಾಗಿ, ಸುಗಮ, ಸುಲಲಿತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕಾದ್ದು ಸಿದ್ದರಾಮಯ್ಯ ಅವರ ಎದುರಿಗೆ ಇರುವ ಅತಿ ದೊಡ್ಡ ಜವಾಬ್ದಾರಿ. ರಾಜ್ಯದ ಹಿರಿಯ ಮುತ್ಸದ್ದಿಗಳ ಪೈಕಿ ಅಗ್ರ ಸ್ಥಾನದಲ್ಲಿ ನಿಲ್ಲುವ ಸಿದ್ದರಾಮಯ್ಯ ಅವರು ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲಿ ಅನ್ನೋದೇ ಎಲ್ಲರ ಆಶಯ.