ಬೆಂಗಳೂರು: ಕೊಲೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾದ ಅಪರಾಧಿಗೆ 9 ವರ್ಷದಿಂದ ಪ್ರೀತಿಸುತ್ತಿರುವ ಯುವತಿಯನ್ನು ವರಿಸಲು 15 ದಿನ ಪೆರೋಲ್ ನೀಡಿದ್ದ ಹೈಕೋರ್ಟ್, ಇದೀಗ ಜ್ಯೋತಿಷಿಗಳ ಸಲಹೆ ಮೇರೆಗೆ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿಸಲು ಪೋಷಕರು ನಿಶ್ಚಯಿಸಿದ ಹಿನ್ನೆಲೆಯಲ್ಲಿ ಮದುವೆ, ಮಧುಚಂದ್ರ ಮತ್ತು ಇತರೆ ಧಾರ್ಮಿಕ ಆಚರಣೆ ಮಾಡಲು 60 ದಿನಗಳ ಕಾಲ ಪೆರೋಲ್ ಅವಧಿ ವಿಸ್ತರಿಸಿದೆ. ಪೆರೋಲ್ ವಿಸ್ತರಣೆ ಕೋರಿ ನವವಿವಾಹಿತ ಕೈದಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಏ.5ರಿಂದ ಏ.20ರ ಸಂಜೆ 6 ಗಂಟೆಯವರೆಗೆ ಅರ್ಜಿದಾರನಿಗೆ ಪೆರೋಲ್ ನೀಡಲಾಗಿತ್ತು. ಆತ, ವಿವಾಹ ನೋಂದಣಿ ಕಚೇರಿಯಲ್ಲಿ ಏ.6ರಂದೇ ವಿವಾಹ ನೋಂದಾಯಿಸಿ ಏ.11ರಂದು ವಿವಾಹವಾಗಿದ್ದನು. ಸದ್ಯ 60 ದಿನ ಪೆರೋಲ್ ವಿಸ್ತರಣೆಗೆ ಕೋರಿ, ಮಧ್ಯಂತರ ಅರ್ಜಿ ಸಲ್ಲಿಸಿದ್ದ. ಅದರಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪರಿಶೀಲಿಸಿದ ಹೈಕೋರ್ಟ್ ಪೆರೋಲ್ ಅವಧಿಯನ್ನು ವಿಸ್ತರಿಸಿ ಅದೇಶಿಸಿದೆ. ಅಲ್ಲದೆ, ಪುನಃ ಇದೇ ರೀತಿಯ ಕಾರಣ ನೀಡಿ ಪೆರೋಲ್ ವಿಸ್ತರಣೆಗೆ ಅರ್ಜಿ ಸಲ್ಲಿಸಿದರೆ, ಅದನ್ನು ಪುರಸ್ಕರಿಸಲಾಗದು. ಪೆರೋಲ್ ಅವಧಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಸಂಬಂಧಪಟ್ಟ ಠಾಣೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಕೈದಿಗೆ ನಿರ್ದೇಶಿಸಿದೆ.
ಪೆರೋಲ್ ವಿಸ್ತರಣೆಗೆ ಮಧ್ಯಂತರ ಅರ್ಜಿ:
ವಿಚಾರಣೆ ವೇಳೆ ವಕೀಲ ಡಿ.ಮೋಹನ್ ಕುಮಾರ್ ಹಾಜರಾಗಿ, ಪ್ರಕರಣದಲ್ಲಿ ಹೈಕೋರ್ಚ್ ಪೆರೋಲ್ ನೀಡಿದ ಹಿನ್ನೆಲೆಯಲ್ಲಿ ಅಪರಾಧಿ ಅಶ್ವಿನ್ ತನ್ನ ಪ್ರೇಯಸಿ ಭವ್ಯಾ (ಹೆಸರು ಬದಲಿಸಲಾಗಿದೆ)ರನ್ನು ಏ.11ರಂದು ವಿವಾಹವಾಗಿದ್ದಾನೆ. ಆದರೆ ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಚರಣೆ ಅನ್ವಯ ಜೂನ್ ಮೊದಲ ವಾರದಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಭವ್ಯಾ ಪೋಷಕರು ನಿಶ್ಚಯಿಸಿದ್ದಾರೆ. ಮದುವೆ ನಂತರ ಮಧುಚಂದ್ರ ಮತ್ತು ದೇವಸ್ಥಾನಗಳಿಗೆ ಭೇಟಿ ಸೇರಿದಂತೆ ಹಿಂದೂ ಸಂಪ್ರದಾಯದ ಇತರೆ ವಿಧಿ-ವಿಧಾನ ನೆರವೇರಿಸಬೇಕಾಗುತ್ತದೆ. ಆದರೆ, ಈ ಹಿಂದೆ ಮಂಜೂರು ಮಾಡಿದ ಪೆರೋಲ್ ಅವಧಿ ಏ.20ಕ್ಕೆ ಕೊನೆಯಾಗಲಿದ್ದು, ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಿಸಬೇಕು ಎಂದು ಕೋರಿದರು.
ಒಂದೊಮ್ಮೆ ಪೆರೋಲ್ ವಿಸ್ತರಿಸದಿದ್ದರೆ ಅರ್ಜಿದಾರರಿಗೆ ಸರಿಪಡಿಸಲಾಗದ ನಷ್ಟ ಉಂಟಾಗಲಿದೆ. ಪೆರೋಲ್ ನೀಡಿದರೆ ಜೈಲು ಪ್ರಾಧಿಕಾರ ಮತ್ತು ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಪುನಃ ಪೆರೋಲ್ಗೆ ಮನವಿ ಮಾಡುವುದಿಲ್ಲ. ಅವಧಿ ಮುಗಿದ ನಂತರ ಸ್ವತಃ ಅಶ್ವಿನ್ ಕೇಂದ್ರ ಕಾರಾಗೃಹದ ಅಧಿಕಾರಿಗಳ ಮುಂದೆ ಹಾಜರಾಗುತ್ತಾನೆ ಎಂದು ಕೋರ್ಚ್ಗೆ ಭರವಸೆ ನೀಡಿದರು. ಈ ಮನವಿ ಪುರಸ್ಕರಿಸಿದ ಹೈಕೋರ್ಟ್, ಅಶ್ವಿನ್ ಪೆರೋಲ್ ಅವಧಿಯನ್ನು 60 ಕಾಲ ವಿಸ್ತರಿಸಿ ಏ.19ರಂದು ಆದೇಶಿಸಿದೆ.
ಪ್ರಕರಣದ ವಿವರ:
ಸ್ಥಿರಾಸ್ತಿ ವ್ಯಾಜ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಪ್ರಕರಣ ಸಂಬಂಧ 2015ರ ಆ.17ರಂದು ಕೋಲಾರದ ಅಶ್ವಿನ್ನನ್ನು (ಘಟನೆ ನಡೆದಾಗ 21 ವರ್ಷ) ಪೊಲೀಸರು ಬಂಧಿಸಿದ್ದರು. ಸೆಷನ್ಸ್ ನ್ಯಾಯಾಲಯ 2019ರಲ್ಲಿ ಅಶ್ವಿನ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿದೆ. ಈಗಾಗಲೇ 6 ವರ್ಷ ಜೈಲು ವಾಸ ಪೂರೈಸಲಾಗಿದ್ದು, ನಾಲ್ಕು ವರ್ಷ ಬಾಕಿಯಿದೆ.
ಕಳೆದ ಒಂಬತ್ತು ವರ್ಷಗಳಿಂದ ಅಶ್ವಿನ್ ಮತ್ತು ಭವ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಭವ್ಯಾಗೆ ಬೇರೊಬ್ಬರ ಜೊತೆಗೆ ಮದುವೆ ಮಾಡಲು ಪೋಷಕರು ನಿಶ್ಚಯಿಸಿದ್ದರು. ಇದರಿಂದ ಅಶ್ವಿನ್ ಮತ್ತು ಭವ್ಯಾ ಮದುವೆಯಾಗಲು ನಿರ್ಧರಿಸಿ, ಪೆರೋಲ್ಗೆ ಮನವಿ ಮಾಡಿದ್ದರು. ಅದನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಪರಿಗಣಿಸದ ಕಾರಣ ಭವ್ಯಾ ಮತ್ತು ಅಶ್ವಿನ್ ತಾಯಿ ಹೈಕೋರ್ಟ್ ಕದ ತಟ್ಟಿದ್ದರು. ಮದುವೆಯಾಗಲು ಅಶ್ವಿನ್ಗೆ 15 ದಿನ ಪೆರೋಲ್ ಮಂಜೂರು ಮಾಡಿ 2023ರ ಮಾ.31ರಂದು ಹೈಕೋರ್ಟ್ ಆದೇಶಿಸಿತ್ತು.