2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಭೂತಪೂರ್ವ ಗೆಲುವು ಸಾಧಿಸಿದೆ. ಅನೌಪಚಾರಿಕ ಶಾಸಕಾಂಗ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಹೊಸ ಸರ್ಕಾರದ ಬಳಿ ಹಲವರು ಬೇಡಿಕೆಗಳನ್ನು ಇಡುತ್ತಿದ್ದು, ನಟ, ಹೋರಾಟಗಾರ ಚೇತನ್ ಹೊಸ ಸರ್ಕಾರದ ಮುಂದೆ ಒತ್ತಾಯವೊಂದನ್ನು ಇರಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ 5 ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿರುವ ಚೇತನ್, ಈ ಹಿಂದಿನ ಸರ್ಕಾರ ತಂದಿದ್ದ, ಗೋಹತ್ಯೆ ವಿರೋಧಿ ಮಸೂದೆ ಮತ್ತು ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕಬೇಕು ಎಂದಿದ್ದಾರೆ. ಮಾತ್ರವಲ್ಲದೆ ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿದ್ದ 4% ಮುಸ್ಲಿಂ OBC ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು. ಪರಿಶಿಷ್ಟ ಪಂಗಡ ಒಳ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿಯನ್ನು (ಜಾತಿ/ಪ್ರದೇಶ/ಇತ್ಯಾದಿ) ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
2021 ರಲ್ಲಿ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆಯ ಬಳಿಕ ಗೋಹತ್ಯೆ ಕಾಯ್ದೆಯನ್ನು ತರಲಾಗಿತ್ತು. ಆಗಲೂ ಚೇತನ್ ಅಹಿಂಸ ಈ ಕಾಯ್ದೆಯನ್ನು ವಿರೋಧಿಸಿದ್ದರು. ಇನ್ನು ಮತಾಂತರ ನಿಷೇಧ ಕಾಯ್ದೆಯೂ ಸಹ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಮತಾಂತರ ನಿಷೇಧ ಕಾಯ್ದೆಯು ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಚೇತನ್ ಅಹಿಂಸ ಸೇರಿದಂತೆ ಹಲವರು ಆಕ್ಷೇಪವ್ಯಕ್ತಪಡಿಸಿದ್ದರು. ಆದರೆ ಮತಾಂತರಕ್ಕೆ ಒಪ್ಪಿಗೆ ಇದೆ ಆದರೆ ಬಲವಂತದ ಮತಾಂತರಕ್ಕೆ ನಿಷೇಧ ಹೇರುತ್ತಿದ್ದೇವೆ ಎಂದು ಆಡಳಿತ ಸರ್ಕಾರ ವಿವರಣೆ ನೀಡಿತ್ತು.
ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಜಾತಿ ಗಣತಿ ಮಾಡಲಾಗಿತ್ತು. ಆದರೆ ಅವರು ಅದನ್ನು ಬಹಿರಂಗಪಡಿಸಿರಲಿಲ್ಲ. ಆ ಬಳಿಕ ಬಂದ ಬಿಜೆಪಿ ಸರ್ಕಾರವೂ ಸಹ ಜಾತಿ ಗಣತಿ ಬಹಿರಂಗಪಡಿಸಲಿಲ್ಲ. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು ಎಂದು ಆಗಿನಿಂದಲೂ ಹಲವರು ಒತ್ತಾಯಿಸುತ್ತಲೇ ಇದ್ದಾರೆ. ಇದೀಗ ಚೇತನ್ ಅಹಿಂಸ ಈ ಬಗ್ಗೆಯೂ ನೂತನ ಸರ್ಕಾರವನ್ನು ಒತ್ತಾಯಿಸಿದ್ದಾರೆ.