ಹಾಸನ: ನಾನು ಯಾರನ್ನು ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ, ಮುಸ್ಲಿಂ ಭಾಂದವರನ್ನು ಅತಿ ಹೆಚ್ಚು ಪ್ರೀತಿಸಿ ಮತ್ತು ಗೌರವ ಕೊಡುವ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಇದ್ದರೆ ಆಕ್ರೋಶ ಹೊರ ಹಾಕುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಶಾಸಕ ಪ್ರೀತಂ ಜೆ. ಗೌಡ ಹೇಳಿದ್ದಾರೆ.
ವಿದ್ಯಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕಳೆದ ಚುನಾವಣೆಯಲ್ಲಿ 63 ಸಾವಿರ ಮತ ಕೊಟ್ಟು ಆಶೀರ್ವಾದ ಮಾಡಿದ್ದು, ಈ ಭಾರಿ ಕಳೆದ ಬಾರಿಗಿಂತ 16 ಸಾವಿರ ಹೆಚ್ಚು ಮತಕೊಟ್ಟು, ನಾನು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿದ್ದಾರೆ. ನನ್ನ ಅಭಿವೃದ್ಧಿ ಕೆಲಸ, ಮಾಡ್ತಿರುವ ಸೇವೆ ಗುರುತಿಸಿದ್ದಾರೆ. ಆದ್ರೆ ಫಲಿತಾಂಶ ವಿರುದ್ಧವಾಗಿ ಬಂದಿರಬಹುದು. ಆದರೆ ಜನರ ಆಶೀರ್ವಾದ ಪ್ರೀತಂಗೌಡ ಪರ ಇದೆ ಎನ್ನುವುದಕ್ಕೆ ಶೇ.25 ರಷ್ಟು ಮತ ನೀಡಿದ್ದಾರೆ ಎಂದರು.
ಅಭಿಮಾನಿ ದೇವರುಗಳಿಗೆ ಅಭಾರಿ
ಈ ಬಾರಿಯ ಚುನಾವಣೆಯಲ್ಲಿ ನನಗೆ 77, 300ಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ, ಬಿಜೆಪಿ ಕಾರ್ಯಕರ್ತರುಗಳಿಗೆ, ಅಭಿಮಾನಿ ದೇವರುಗಳಿಗೆ, ಅಭಾರಿಯಾಗಿದ್ದೇನೆ, ನನ್ನ ರಾಜಕೀಯ ಜೀವನದ ಕಷ್ಟಕರ ಸಮಯದಲ್ಲಿ ನನಗೆ ಬೆಂಬಲ ಕೊಟ್ಟಿದ್ದಾರೆ. ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ಭಾವನೆಗೆ ಪೂರಕವಾಗುವ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಕಳೆದ ಬಾರಿ ೧೩ ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೆ, ಈ ಭಾರಿ ಅದರ ಅರ್ಧದಷ್ಟು ಮತಗಳಿಂದ ವಂಚಿತನಾಗಿದ್ದೇನೆ. ಯಾವುದೇ ಕಾರಣದಿಂದಲೂ ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೇ.15 ರಷ್ಟು ಮತ ಪಡೆದಿದ್ದಾರೆ, 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತಿ ಕಡಿಮೆ ಶೇಕಡಾವಾರು ಮತ ಪಡೆದಿರುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 4ಸಾವಿರ ಮತ ಪಡೆದ ಪರಿಣಾಮ ಈ ಬಾರಿ ತನಗೆ ಸೋಲಾಗಿದೆ ಎಂದರು.
ಪ್ರೀತಂಗೌಡ ಯಾವ ರೀತಿ ಕೆಲಸ ಮಾಡಿದ್ದಾನೆ ಅದನ್ನು ನೂತನ ಶಾಸಕರು ಮುಂದುವರಿಸಿಕೊಂಡು ಹೋಗಲಿ ಎಂದ ಅವರು, ಯುವಕರು, ವಿದ್ಯಾವಂತರಿದ್ದಾರೆ ಇನ್ನೂ ಹೆಚ್ಚು ಕೆಲಸ ಮಾಡುವ ನಿರೀಕ್ಷೆ ಇದೆ, ನಾವು ಮಾಡಿರುವ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇನ್ನಷ್ಟು ಕೆಲಸ ಮಾಡಲಿ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನೂತನ ಶಾಸಕರು ಮಾಡಲಿ ಎಂದು ಸಲಹೆ ನೀಡಿದರು.ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಭಾರಿ ಕಾಂಗ್ರೆಸ್ಗೆ ಓಟು ಹಾಕಿದಂತಹ ಒಂದು ವರ್ಗ ಜನತಾದಳಕ್ಕೆ ಮತ ಹಾಕಿದ್ದಾರೆ.ಅದರಲ್ಲಿ ವ್ಯತ್ಯಾಸ ಇದ್ದರೆ ಹೇಳಿ ತಿದ್ದಿಕೊಳ್ಳುವ ಕೆಲಸ ಮಾಡ್ತಿನಿ ನಾನು ಒಂದು ವರ್ಗ ಅಂತ ಹೇಳಿದ್ದೇನೆ, ಒಂದು ಸಮುದಾಯ ಅಂತ ಹೇಳಿಲ್ಲ, ಒಂದು ವರ್ಗದ ಜನ ಕಳೆದ ಭಾರಿ ಕಾಂಗ್ರೆಸ್ ಮತ ಹಾಕ್ತಿದ್ದರು. ಈಗ ಜೆಡಿಎಸ್ ಹಾಕಿದ್ದಾರೆ. ಆ ವರ್ಗದ ಮತಗಳು ನನಗೆ ಬೇಕಿಲ್ಲ ಎಂದರು.
ಜನ ಸೇವೆ ನಿರಂತರ
2024ರ ಚುನಾವಣೆ ದೇಶದ ಚುನಾವಣೆ, ಚುನಾವಣೆ ಎಕ್ಸಾಮ್ ಇದ್ದ ಹಾಗೆ, ನಾನು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಎಲ್ಲಾ ಚುನಾವಣೆಯಲ್ಲು ಪರೀಕ್ಷೆ ಬರೆಯುತ್ತೇನೆ. ಸಾಮಾನ್ಯ ಕುಟುಂಬದ ಸಾಮಾನ್ಯ ವ್ಯಕ್ತಿ ನಾನು. ನನಗೆ ಯಾವುದೇ ಕಾತುರ ಅಥವಾ ಆತುರ ನನಗೆ ಇಲ್ಲ. ಅಧಿಕಾರ ಇದ್ದರೆ ಮಾತ್ರ ಜನ ಸೇವೆ ಮಾಡಬೇಕು ಎಂದು ಏನು ಇಲ್ಲ. ಅಧಿಕಾರ ಇಲ್ಲದ ಸಂದರ್ಭದಲ್ಲೂ ಜನ ಸೇವೆ ಮಾಡಿದ್ದೇನೆ. ಮುಂದೆಯೂ ಜನ ಸೇವೆ ಮಾಡುತ್ತೇನೆ. ಜನರ ಮದ್ಯೆ ಇರುತ್ತೇನೆ, ಜನರ ಸೇವೆ ಮಾಡುತ್ತೇನೆ. ಅವಕಾಶ ನೀಡಿದಾಗ ಸರ್ಕಾರದ ಭಾಗವಾಗಿ ಕೆಲಸ ಮಾಡುತ್ತೇನೆ ಎಂದರು. ಕಸ ವಿಲೇವಾರಿ, ಆಟೋ ಚಾಲಕರಿಗೆ ಜೀವವಿಮೆ ಮುಂತಾದ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಗರ ಸ್ವಚ್ಚವಾಗಿ, ಸುಂದರವಾಗಿ ಇರಬೇಕು ಎಂಬ ಕನಸನ್ನು ಹೊತ್ತು ಬಂದಿರುವವನು ಮುಂದಿನ ದಿನಗಳಲ್ಲಿ ಇದಕ್ಕೆ ಬದ್ದವಾಗಿ ಇರುತ್ತೇನೆ.
ಸ್ವಚ್ಚ ಹಾಸನ ಸುಂದರ ಹಾಸನ ನನ್ನ ಕಲ್ಪನೆ ಮತ್ತು ಇದು ನನ್ನ ಜವಾಬ್ದಾರಿ ಎಂದಿಗೂ ಕೈಬಿಡುವುದಿಲ್ಲ. ದೇವಾಲಯದ ಅಭಿವೃದ್ಧಿಗೆ ನಾನು ಬದ್ದನಿದ್ದೇನೆ. ಹಾಲಿ ಶಾಸಕರಿಗೆ ನನ್ನ ಪೂರ್ಣ ಪ್ರಮಾಣದ ಬೆಂಬಲ ಇದೆ. ನೀರಿನ ಗುಳ್ಳೆ ಒಂದು ಕ್ಷಣದ ನಂತರ ಇರುವುದಿಲ್ಲ. ಶ್ರಮವಹಿಸಿ ಕಟ್ಟಿದ ಮನೆ ಶ್ರಮ ವಹಿಸಿದವರವರಿಗೆ ಮಾತ್ರ ಗೊತ್ತಿರುತ್ತೆ, ಹಾಲಿ ಶಾಸಕರು ಸ್ವಲ್ಪ ಸಮಾಧಾನವಾಗಿ ಹಾಸನ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಮಾತ್ರ ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಲಿ. 2028ರ ಚುನಾವಣೆಗೆ ನನ್ನ ಅಭಿವೃದ್ದಿ ಮತ್ತು ಇವರ ಅಭಿವೃದ್ದಿ ವಿಚಾರದಿಂದ ಚುನಾವಣೆ ನಡೆಯುತ್ತದೆ. ಎಲ್ಲ ಸರಿ ಇದೆ ಎಂಬ ಬಂಡವಾದ ಮಾಡುವುದಿಲ್ಲ ಕೆಲವು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವೆ. ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮತ ಬಂದಿದ್ದರೆ ನನ್ನ ಸೋಲನ್ನು ನಾನು ಒಪ್ಪಿಕೊಳ್ಳುತ್ತಿದ್ದೆ. ಪ್ರೀತಂಗೌಡ ಒಬ್ಬ ನಾಯಕ, ನಾಯಕನಾಗಿಯೇ ಇರುತ್ತಾನೆ. ಹಿಂದೆಹೋಗಿ ಆಲೂರು ಕ್ಷೇತ್ರ ಗೆಲ್ಲಿಸಿಕೊಂಡಿದ್ದೇನೆ, ಹಾಸನದಲ್ಲಿ ಇದ್ದುಕೊಂಡು ನಾಯಕನಾಗಿದ್ದೇನೆ ಮುಂದಿನ ದಿನಗಳಲ್ಲಿ ಬೆಂಗಳೂರು ಮಟ್ಟದಲ್ಲಿ ರಾಜ್ಯ ಮಟ್ಟದ ಕರ್ತವ್ಯ ನಿರ್ವಹಿಸುವೆ. ನನಗೆ ಪಕ್ಷ ತಾಯಿ ಇದ್ದಂತೆ ಮಾನಸಿಕವಾಗಿ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ ಎಂದು ತಿಳಿಸಿದರು.