ಬೆಂಗಳೂರು: ಸಮರ್ಥ ಪ್ರತಿಪಕ್ಷವಾಗಿ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ(Bommai) ಹೇಳಿದ್ದಾರೆ. ಈ ಸಂಬಂಧ ಆರ್ ಟಿ ನಗರದ ನಿವಾಸದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಫಲಿತಾಂಶದ ಆರು ದಿನಗಳ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ. ಕೆ. ಶಿವಕುಮಾರ್ ಆಯ್ಕೆ ಆಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದ ತೀರ್ಪು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ರಾಜಕಾರಣದಲ್ಲಿ ಪಾತ್ರಗಳನ್ನು ತೀರ್ಮಾನಿಸುವುದು ಜನ. ನಮಗೆ ವಿಪಕ್ಷವಾಗಿ ಜನ ತೀರ್ಪು ಕೊಟ್ಟಿದ್ದಾರೆ. ಕಾಂಗ್ರೆಸ್ ಮೇಲೆ ಜನ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ಗ್ಯಾರಂಟಿಗಳ ಮೇಲೆ ಜನರಿಗೆ ದೊಡ್ಡ ವಿಶ್ವಾಸ ಇದೆ. ಅದನ್ನು ಅವರು ಪೂರೈಸಬೇಕಾಗಿದೆ. ಪೂರೈಸುವ ವೇಳೆ ರಾಜ್ಯದ ಆರ್ಥಿಕ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳುವುದು ಕೂಡ ಅವರ ಜವಾಬ್ದಾರಿ. ಕಾಂಗ್ರೆಸ್ನವರು ಯಾವ ರೀತಿ ನಿಭಾಯಿಸುತ್ತಾರೆ ಅಂತ ಕಾದು ನೋಡೋಣ ಎಂದು ತಿಳಿಸಿದರು.
ವಿಪಕ್ಷವಾಗಿ ನಾವು ಜವಾಬ್ದಾರಿಯಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ನೆಲ-ಜಲ ವಿಚಾರದಲ್ಲಿ ರಾಜಕೀಯ ಬೆರೆಸದೇ ಕೆಲಸ ಮಾಡಬೇಕು. ಜನರಿಗೆ ಅನ್ಯಾಯ ಆದಾಗ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇವೆ. 2023 ರಾಜ್ಯದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಹಾಗೂ ಜೊತೆ ಜೊತೆಗೆ ಸವಾಲುಗಳೂ ಇವೆ. ಕರ್ನಾಟಕ ಸುಭಿಕ್ಷವಾಗಿರುವ ನಾಡು. ಜನ ಶಾಂತಿಯನ್ನು ಮಾನ್ಯ ಮಾಡುವಂತಹವರು. ಕರ್ನಾಟಕದ ಅಭ್ಯುದಯ ದೇಶಕ್ಕೆ ಪರಿಣಾಮ ಬೀರುತ್ತದೆ. ಈ ಆಯಾಮಗಳ ಮೇಲೆ ವಿಪಕ್ಷವಾಗಿ ನಾವು ಇರುತ್ತೇವೆ ಎಂದು ಬೊಮ್ಮಾಯಿ ಹೇಳಿದರು.