ಬೆಂಗಳೂರು: ಶನಿವಾರ ಸಿದ್ದರಾಮಯ್ಯ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. 2013 ರಿಂದ 2018ರವರೆಗೂ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದ್ದ ಸಿದ್ದರಾಮಯ್ಯ ಅವರದ್ದು ಇದು ಸಿಎಂ ಆಗಿ ಎರಡನೇ ಇನ್ನಿಂಗ್ಸ್. ಇದುವರೆಗೂ ಅನೇಕರು ಎರಡಕ್ಕಿಂತ ಅಧಿಕ ಬಾರಿ ಸಿಎಂ ಆಗಿ ಕರುನಾಡಿನ ಸಾರಥ್ಯ ವಹಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಈ ಬಾರಿ ಒಂದಿಷ್ಟು ಮುಖ್ಯಮಂತ್ರಿಗಳ ದಾಖಲೆಯನ್ನು ಮುರಿಯಲಿದ್ದು, ಬಿಎಸ್ ಯಡಿಯೂರಪ್ಪ ಹಾಗೂ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಈ ಬಾರಿ ಎರಡು ವರ್ಷಕ್ಕಿಂತ ಹೆಚ್ಚು ಅಧಿಕಾರ ನಡೆಸಿದರೆ ಅತಿ ಹೆಚ್ಚು ದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದವರಲ್ಲಿ ಸಿದ್ದರಾಮಯ್ಯ ಮೂರನೇ ಸ್ಥಾನಕ್ಕೆ ಏರಲಿದ್ದಾರೆ. ಸದ್ಯ ಸಿದ್ದರಾಮಯ್ಯ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಮೊದಲ ಸ್ಥಾನದಲ್ಲಿ ಡಿ ದೇವರಾಜ ಅರಸು!
ಕರ್ನಾಟಕದ ಸಿಎಂ ಆಗಿ ಅತಿ ಹೆಚ್ಚು ದಿನ ಆಡಳಿತ ನಡೆಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಡಿ ದೇವರಾಜ ಅರಸು ಅವರು ಇದ್ದಾರೆ. ರಾಜ್ಯದ 9ನೇ ಮುಖ್ಯಮಂತ್ರಿಯಾಗಿದ್ದ ಡಿ ದೇವರಾಜ ಅರಸು ಅವರು ಎರಡು ಪ್ರತ್ಯೇಕ ಅವಧಿಯಲ್ಲಿ 2,790 ದಿನಗಳು ರಾಜ್ಯದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಬಳಿಕ ಎಸ್ ನಿಜಲಿಂಗಪ್ಪ ಅವರು ಎರಡನೇ ಸ್ಥಾನದಲ್ಲಿದ್ದು, 2,729 ದಿನಗಳು ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರು ಕೂಡ ಪ್ರತ್ಯೇಕ ಅವಧಿಯಲ್ಲಿ ಸಿಎಂ ಆಗಿದ್ದರು.
ಇನ್ನು, 1,967 ದಿನ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಆಡಳಿತ ನಡೆಸಿದವರಲ್ಲಿ ಮೂರನೇ ಸ್ಥಾನ ಪಡೆದಿದ್ದು, 1901 ದಿನ ಸಿಎಂ ಆಗಿ ಆಡಳಿತ ನಡೆಸಿರುವ ಬಿಎಸ್ ಯಡಿಯೂರಪ್ಪ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, 1,828 ದಿನ ಕಚೇರಿಯಲ್ಲಿದ್ದರು. ಆದ್ದರಿಂದ ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.
ಸಿದ್ದರಾಮಯ್ಯ ಬಳಿಕ ಎಸ್ಎಂ ಕೃಷ್ಣ ಅವರು ಪಟ್ಟಿಯಲ್ಲಿದ್ದು, 1,691 ದಿನ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೆಸಿ ರೆಡ್ಡಿ (1618 ದಿನ), ಕೆಂಗಲ್ ಹನುಮಂತಯ್ಯ (1,603 ದಿನ), ಬಿಡಿ ಜತ್ತಿ (1,393 ದಿನ) ಹಾಗೂ ವೀರೇಂದ್ರ ಪಾಟೀಲ್ (1,337 ದಿನ) ನಂತರದ ಸ್ಥಾನಗಳಲ್ಲಿ ಇದ್ದಾರೆ. ಆದರೆ, ಕಡಿದಾಳ್ ಮಂಜಪ್ಪ ಅವರು ಕೇವಲ 73 ದಿನಗಳ ಕಾಲ ಕರ್ನಾಟಕದ ಸಿಎಂ ಆಗಿ ಆಡಳಿತ ನಡೆಸಿದ್ದರು. ಅರ್ಧಕ್ಕಿಂತ ಹೆಚ್ಚು ಸಿಎಂಗಳು ಎರಡು ವರ್ಷಕ್ಕಿಂತ ಕಡಿಮೆ ಆಡಳಿತ ನಡೆಸಿದ್ದಾರೆ.
ಲಿಂಗಾಯತ, ಒಕ್ಕಲಿಗರ ಪ್ರಾಬಲ್ಯ!
ಇದುವರೆಗೂ 9 ಜನ ಲಿಂಗಾಯತರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರೆ, 7 ಮಂದಿ ಒಕ್ಕಲಿಗರು ಸಿಎಂ ಆಗಿದ್ದರೆ, ಮೂವರು ಇತರೆ ಹಿಂದುಳಿದ ವರ್ಗಗಳ ನಾಯಕರು, ಇಬ್ಬರು ಬ್ರಾಹ್ಮಣರು ಹಾಗೂ ಇತರೆ ಜಾತಿಯ ಇಬ್ಬರು ಸಿಎಂ ಆಗಿ ಕರ್ನಾಟಕವನ್ನು ಆಳಿದ್ದಾರೆ.