ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಶಾಸಕ ಲಕ್ಷ್ಮಣ್ ಸವಧಿ ಅವರು ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಶತಾಯಗತಾಯ ಜಗದೀಶ್ ಶೆಟ್ಟರ್ ಸೋಲಿಸಲು ಹಣದ ಹೊಳೆಯನ್ನೇ ಹರಿಸಿದ್ದಾರೆ. ಅವರು ಅಥಣಿ ಮತ್ತು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ರು. ಅವೆರಡೂ ಕ್ಷೇತ್ರಗಳಲ್ಲಿ ಕೇಂದ್ರ ನಾಯಕರನ್ನು ಕರೆಸಿದ್ರು. ಅಮಿತ್ ಶಾ, ನರೇಂದ್ರ ಮೋದಿ ರೋಡ್ ಶೋ ಮಾಡಿದ್ರು.
ಅವರಿಗೆ ಗ್ರೌಂಡ್ ರಿಯಾಲಿಟಿ ಇರಲಿಲ್ಲ. ರಾಜ್ಯ ಬಿಜೆಪಿ ನಾಯಕರು ಅವರನ್ನು ಕರೆಸಿ ಮುಜುಗರ ತರಿಸಿಬಿಟ್ರು. ಪಾಪ ಅವರನ್ನು ಕರೆಸಿ ಮುಜುಗರ ತರಿಸಬಾರದಿತ್ತು. ನಾನು ಕೇಂದ್ರ ನಾಯಕರ ಜೊತೆ ಅನೇಕ ವರ್ಷಗಳ ಒಡನಾಟವಿದೆ ಹೀಗಾಗಿ ನನಗೆ ನರೇಂದ್ರ ಮೋದಿ, ಅಮಿತ್ ಶಾರ ಮೇಲೆ ಗೌರವ ಇದೆ ಎಂದರು. ಸೋತವರನ್ನು ಉಪಮುಖ್ಯಮಂತ್ರಿ ಮಾಡಿದ್ದೇವೆ ಎಂದು ಬಿಜೆಪಿಗರು ಹೇಳುತ್ತಿರುವ ವಿಚಾರ ಪ್ರಸ್ತಾಪಿಸಿದ ಸವದಿ,
ಪದೇಪದೆ ಹೇಳ್ತಾರೆ. ಸೋತವನ ಮಂತ್ರಿ ಮಾಡಿದ್ದೇವೆ ಎಂದು. ಅವರು ಇನ್ನೂ 25 ವರ್ಷ ಹೀಗೆ ಹೇಳ್ತಾನೆ ಇರ್ತಾರೆ. ಹೇಳೋದು ಬಿಡಲ್ಲ. ಸರಿ ನನ್ನನ್ನು ಯಾಕೆ ಡಿಸಿಎಂ ಸ್ಥಾನದಿಂದ ಕೈಬಿಟ್ರಿ..? ಸಿಡಿ ಕೇಸ್ ಇತ್ತಾ ? ಮತ್ತೇನಾದರೂ ಕೇಸ್ ಇತ್ತಾ? ಬಿಡಿ, ಈಗ ಮತ್ತೆ ಅದದೇ ಹೇಳಿ ಪ್ರಯೋಜನ ಇಲ್ಲ. ನಾನು ಈಗ ಯಡಿಯೂರಪ್ಪರ ಮನಸ್ಸಿಗೆ ನೋವು ಮಾಡಲ್ಲ ಎಂದು ಟಾಂಗ್ ನೀಡಿದರು.