ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ್ದೇ ತಡ, ರಾಷ್ಟ್ರ ರಾಜಕಾರಣದ ಸಮೀಕರಣವೇ ಬದಲಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಗೆಲುವು ಮುಂಬರುವ ಲೋಕಸಭಾ ಚುನಾವಣೆಗೂ ಸಹಕಾರಿಯಾಗಬೇಕು ಅನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತಂತ್ರಗಾರಿಕೆ ರೂಪಿಸುತ್ತಿದೆ. ಇದಕ್ಕಾಗಿಯೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಮಾಣ ವಚನ ಸಮಾರಂಭಕ್ಕೆ ದೇಶಾದ್ಯಂತ ಇರುವ ವಿರೋಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗುತ್ತಿದೆ. ಬಿಜೆಪಿಯೇತರ ಸರ್ಕಾರ ಇರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಂದು ಕಡೆ ಸೇರಿಸಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ ಮಾಡಲು ಕಾಂಗ್ರೆಸ್ ಮುಂದಾಗಿದೆ. 2024ರಲ್ಲಿ ದಿಲ್ಲಿ ಗದ್ದುಗೆ ಏರಲು ಬೆಂಗಳೂರಿನಿಂದಲೇ ಹೋರಾಟದ ಪಾಂಚಜನ್ಯ ಮೊಳಗಿಸಲು ನಿರ್ಧರಿಸಿದೆ. ಆದ್ರೆ, ಇದು ಅಷ್ಟು ಸುಲಭವೇ? ವಿಪಕ್ಷಗಳ ನಾಯಕನಾಗಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಸಿಗುತ್ತಾ? ಈ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ:
ವಿಪಕ್ಷಗಳ ನಾಯಕನಾಗುವ ಕಾಂಗ್ರೆಸ್ ಕನಸು ಈಡೇರುತ್ತಾ
ದೇಶದಲ್ಲಿ ಬಿಜೆಪಿಯೇತರ ವಿರೋಧ ಪಕ್ಷಗಳ ಪೈಕಿ ಪ್ರಬಲ ರಾಷ್ಟ್ರೀಯ ಪಕ್ಷವಾಗಿ ನಿಂತಿರೋದು ಕಾಂಗ್ರೆಸ್. ಇನ್ನುಳಿದ ಬಹುತೇಕ ಎಲ್ಲಾ ಪಕ್ಷಗಳು ಆಯಾ ರಾಜ್ಯಗಳಿಗೆ ಸೀಮಿತ. ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸಾರಥ್ಯದ ಟಿಎಂಸಿ, ತಮಿಳುನಾಡಿನಲ್ಲಿ ಎಂ. ಕೆ. ಸ್ಟಾಲಿನ್ ನಾಯಕತ್ವದ ಡಿಎಂಕೆ, ಬಿಹಾರದಲ್ಲಿ ಜೆಡಿಯು ನಾಯಕ ಸಿಎಂ ನಿತೀಶ್ ಕುಮಾರ್, ತೆಲಂಗಾಣದಲ್ಲಿ ಕೆಸಿಆರ್.. ಹೀಗೆ ಹಲವು ರಾಜ್ಯಗಳಲ್ಲಿ ಆಯಾ ಪ್ರದೇಶಕ್ಕೆ ಸೀಮಿತವಾದ ನಾಯಕರು ಹಾಗೂ ಪಕ್ಷಗಳಿವೆ. ಈ ಎಲ್ಲಾ ಪಕ್ಷಗಳು ಬಿಜೆಪಿಗೆ ಪ್ರಬಲ ಪೈಪೋಟಿಯನ್ನೇನೋ ನೀಡುತ್ತಿವೆ. ಆದ್ರೆ, ಒಗ್ಗಟ್ಟು ಕಷ್ಟ ಕಷ್ಟ ಎನ್ನುವಂತಾಗಿದೆ. ಇದೀಗ ಕರ್ನಾಟಕದ ನೂತನ ಸಿಎಂ ಹಾಗೂ ಡಿಸಿಎಂ ಪಟ್ಟಾಭಿಷೇಕದ ವೇಳೆ ಈ ಎಲ್ಲಾ ನಾಯಕರನ್ನೂ ಒಗ್ಗೂಡಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಈ ಮೂಲಕ ಬಿಜೆಪಿ ವಿರುದ್ಧ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ ಮಾಡಿ, ಪರೋಕ್ಷವಾಗಿ ವಿಪಕ್ಷಗಳ ನಾಯಕ ನಾನು ಎಂದು ಸಾಬೀತು ಮಾಡೋಕೆ ಕಾಂಗ್ರೆಸ್ ಹೊರಟಿದೆ. ಹಾಗೆ ನೋಡಿದ್ರೆ, 2018ರಲ್ಲಿ ಎಚ್. ಡಿ. ಕುಮಾರಸ್ವಾಮಿ ಪದಗ್ರಹಣದ ವೇಳೆಯಲ್ಲೂ ವಿಪಕ್ಷ ನಾಯಕರ ಸಮ್ಮಿಲನವಾಗಿತ್ತು. ಆದ್ರೆ, 2019ರ ಲೋಕಸಭಾ ಚುನಾವಣೆಯಲ್ಲಿ ಈ ಒಗ್ಗಟ್ಟು ಕಾಣಲಿಲ್ಲ. ಇದೀಗ ಮತ್ತೆ ಅಂಥಾದ್ದೊಂದು ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ.
ರಾಹುಲ್ ಅನರ್ಹತೆ ವೇಳೆಯಲ್ಲೂ ಕಾಂಗ್ರೆಸ್ನಿಂದ ಒಗ್ಗಟ್ಟಿನ ಮಂತ್ರ!
ಸಂಸತ್ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹರನ್ನಾಗಿ ಮಾಡಿದಾಗಲೂ ಕಾಂಗ್ರೆಸ್ ಪಕ್ಷ ದಿಲ್ಲಿಯಲ್ಲಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಿತ್ತು. ಪ್ರಜಾಪ್ರಭುತ್ವ ಉಳಿಸಿ ಅನ್ನೋ ಅಭಿಯಾನವನ್ನೇ ನಡೆಸಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನವಾಗಿ ವಿರೋಧಿಸುವ ವಿರೋಧ ಪಕ್ಷಗಳೂ ಪರ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪರ ದನಿ ಎತ್ತಿದ್ದವು! ಎಎಪಿ, ಟಿಎಂಸಿ, ಎಸ್ಪಿ ಸೇರಿದಂತೆ ಹಲವು ಪಕ್ಷಗಳು ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದ್ದವು. ಇದೇ ಅವಕಾಶ ಬಳಸಿಕೊಂಡು ದೇಶದ ಉದ್ದಗಲಕ್ಕೂ ಇರುವ ಎಲ್ಲಾ ವಿರೋಧ ಪಕ್ಷಗಳ ನಾಯಕನಾಗಲು ಹೊರಟ ಕಾಂಗ್ರೆಸ್ಗೆ ಆಘಾತ ಕಾದಿತ್ತು. ಏಕೆಂದರೆ, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನ ತಮ್ಮ ಒಕ್ಕೂಟದ ಸದಸ್ಯನಾಗಿ ನೋಡಲು ಬಯಸುತ್ತವೆ ಹೊರತು, ನಾಯಕನ ರೂಪದಲ್ಲಿ ಅಲ್ಲ!
ನಾಯಕನಾಗಲು ಹೊರಟಿರುವ ನಿತೀಶ್ ಕುಮಾರ್ ಕಥೆ ಏನು?
ಬಿಜೆಪಿಯನ್ನು ವಿರೋಧಿಸುವ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಬೇಕು ಅನ್ನೋದು ಬಿಹಾರ ಸಿಎಂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಕನಸು. ದೇಶದ ಉದ್ದಲಗಕ್ಕೂ ಇರುವ ಎಲ್ಲಾ ವಿರೋಧ ಪಕ್ಷಗಳೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಒಕ್ಕೂಟದ ಅಭ್ಯರ್ಥಿಯನ್ನು ನಿಲ್ಲಿಸಬೇಕು. ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ವಿರುದ್ಧ ವಿಪಕ್ಷ ಒಕ್ಕೂಟದ ಒಬ್ಬನೇ ಅಭ್ಯರ್ಥಿ ಇರಬೇಕು, ಆತನಿಗೆ ಒಕ್ಕೂಟದ ಎಲ್ಲ ಸದಸ್ಯ ಪಕ್ಷಗಳೂ ಬೆಂಬಲ ನೀಡಬೇಕು. ಆಗ ಮಾತ್ರ ಬಿಜೆಪಿಯನ್ನು ಮಣಿಸಲು ಸಾಧ್ಯ ಅನ್ನೋದು ನಿತೀಶ್ ಕುಮಾರ್ ತಂತ್ರಗಾರಿಕೆ. ತಮ್ಮ ಕಾರ್ಯತಂತ್ರದ ಭಾಗವಾಗಿ ನಿತೀಶ್ ಕುಮಾರ್ ದೇಶಾದ್ಯಂತ ಸುತ್ತಾಡಿದ್ದಾರೆ. ದಿಲ್ಲಿಯಲ್ಲಿ ಕೇಜ್ರಿವಾಲ್, ಬಂಗಾಳದಲ್ಲಿ ಮಮತಾ, ಒಡಿಶಾದಲ್ಲಿ ಪಟ್ನಾಯಕ್, ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸಿಂಗ್ ಯಾದವ್, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಉದ್ಧವ್ ಠಾಕ್ರೆ.. ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್.. ಹೀಗೆ ಹಲವು ನಾಯಕನ್ನು ಭೇಟಿ ಮಾಡಿ ವಿಪಕ್ಷಗಳ ಒಕ್ಕೂಟ ರಚನೆಯ ಪ್ರಸ್ತಾಪ ಮಂಡಿಸಿದ್ದಾರೆ. ಪರೋಕ್ಷವಾಗಿ ಈ ಒಕ್ಕೂಟಕ್ಕೆ ತಾವೇ ನಾಯಕರಾಗುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಖರ್ಗೆ ಹಾಗೂ ರಾಹುಲ್ರನ್ನೂ ನಿತೀಶ್ ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಆದ್ರೆ, ಕರ್ನಾಟಕದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದೇ ತಡ, ರಾಜಕೀಯ ಸಮೀಕರಣವೇ ಬದಲಾಗುವ ಸೂಚನೆಗಳು ಕಂಡು ಬರ್ತಿವೆ. ವಿಪಕ್ಷ ಒಕ್ಕೂಟದ ಡ್ರೈವಿಂಗ್ ಸೀಟ್ನಲ್ಲಿ ಕೂರಲು ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನೇ ವೇದಿಕೆ ಮಾಡಿಕೊಳ್ಳಲು ಹೊರಟಿದೆ!
ಭಿನ್ನ ದನಿಗಳನ್ನು ಒಂದುಗೂಡಿಸೋದು ಸುಲಭ ಸಾಧ್ಯವೇ?
2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸಾರಥ್ಯದ ಬಿಜೆಪಿಯನ್ನು ಮಣಿಸಬೇಕೆಂದರೆ ದೇಶಾದ್ಯಂತ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಲೇ ಬೇಕು. ಬೇರೆ ಪರ್ಯಾಯ ಮಾರ್ಗವೇ ಇಲ್ಲ. ಈ ವಿಚಾರ ವಿಪಕ್ಷ ನಾಯಕರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಆದರೆ ಎಲ್ಲ ಪಕ್ಷಗಳ ನಾಯಕರೂ ಈ ವಿಪಕ್ಷ ಒಕ್ಕೂಟಕ್ಕೆ ತಾನೇ ನಾಯಕನಾಗಬೇಕು ಅಂತಾ ಹೊರಡುತ್ತಿರೋದೇ ಸಮಸ್ಯೆಯ ಮೂಲ. ಕಳೆದ ಒಂದು ವರ್ಷಗಳಿಂದ ದೇಶಾದ್ಯಂತ ಸುತ್ತಾಟ ನಡೆಸುತ್ತಿರುವ ನಿತೀಶ್ ಕುಮಾರ್ ಕೂಡಾ ಇದೇ ಆಶಯ ಹೊಂದಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದ ಮನದಾಳದಲ್ಲೂ ಇದೇ ಆಸೆ ಇದೆ. ಈ ವಿಚಾರವನ್ನು ಅರಿತಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಸಿಎಂ ಸಿದ್ದರಾಮಯ್ಯ ಪದಗ್ರಹಣ ಸಮಾರಂಭಕ್ಕೆ ಗೈರು ಹಾಜರಾಗುತ್ತೇನೆ ಎನ್ನುವ ಮೂಲಕ ತಮ್ಮ ಸಂದೇಶ ರವಾನಿಸಿದ್ದಾರೆ! ಇದು ಕೇವಲ ಸೂಚನೆ ಅಷ್ಟೇ! ಈ ರೀತಿಯ ಹಲವು ಭಿನ್ನ ದನಿಗಳು ದೇಶಾದ್ಯಂತ ಇರುವ ಪ್ರಾದೇಶಿಕ ಪಕ್ಷಗಳ ಮನದಲ್ಲಿ ಇದೆ. ಈ ಎಲ್ಲಾ ಭಿನ್ನ ದನಿಗಳನ್ನು ಒಕ್ಕೊರಲ ದನಿಯಾಗಿ ಪರಿವರ್ತಿಸಬಲ್ಲ ನಾಯಕ ಸದ್ಯದ ಅಗತ್ಯತೆ.