ಬೆಂಗಳೂರು: ರಾಜ್ಯದಲ್ಲಿ ಜೋಡೆತ್ತು ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಕ್ಯಾಬಿನೆಟ್ (Cabinet) ನಲ್ಲೇ ಬಂಪರ್ ಗಿಫ್ಟ್ ಘೋಷಣೆಯಾಗುವ ಸಾಧ್ಯತೆಗಳಿವೆ. ಹೌದು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಜನರ ಮನಗೆಲ್ಲಲು ಕಾಂಗ್ರೆಸ್ (Congress) ಲೆಕ್ಕಾಚಾರ ಹಾಕಿದೆ. 5 ಗ್ಯಾರಂಟಿಗಳಿಗೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸುವ ಹಾಗೂ 5 ಭರವಸೆಗಳ ಜಾರಿಗೆ ಮೊದಲ ಕ್ಯಾಬಿನೆಟ್ ಸಾಕ್ಷಿಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ನ 5 ಪ್ರಮುಖ ಭರವಸೆಗಳೇನು..?
1. ಗೃಹಿಣಿಯರಿಗೆ ತಿಂಗಳಿಗೆ 2,000 ರೂ.
2. 200 ಯುನಿಟ್ ಉಚಿತ ವಿದ್ಯುತ್
3. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
4. ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ
5. ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ಹಾಗೂ 1,500 ನಿರುದ್ಯೋಗಿ ಭತ್ಯೆ
ಇಂದು ಸಿಎಂ ಸಿದ್ದರಾಮಯ್ಯ (Siddramaiah) , ಡಿಸಿಎಂ ಡಿಕೆಶಿ (DK Shivakumar) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಗದ್ದುಗೆ ಏರಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಅದ್ಧೂರಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಪ್ರಮಾಣ ವಚನಕ್ಕೆ ಕೆಂಪುಹಾಸಿನ ವೇದಿಕೆ, ಗಣ್ಯರಿಗೆ ವಿಶೇಷ ಚೇರ್ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಗೇಟ್, ಸಾರ್ವಜನಿಕರಿಗೆ ಮುಕ್ತ ಅವಕಾಶ (ಪಾಸ್ ವ್ಯವಸ್ಥೆ ಇರಲ್ಲ) ಹಾಗೂ ಕಾರ್ಯಕ್ರಮ ವೀಕ್ಷಣೆಗೆ ಎಲ್ಇಡಿ ಪರದೆ ಇರುತ್ತದೆ. ಸಮಾರಂಭದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟೇಡಿಯಂಗೆ ಬಿಗಿ ಭಧ್ರತೆ ಒದಗಿಸಲಾಗಿದ್ದು, 1,500 ಪೊಲೀಸರ ನಿಯೋಜನೆ ಮಾಡಲಾಗಿದೆ.