ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರನ್ನು ಸಿಎಂ ಆಗಿ, ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಲಾಗಿದೆ. ಇಂದು (ಮೇ 20) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ಪ್ರತಿಜ್ಞಾವಿಧಿ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರದ ಘಟಾನುಘಟಿ ನಾಯಕರು ಭಾಗಿಯಾಗಲಿದ್ದು, ಬರುವ ವಿವಿಐಪಿಗಳಿಗೆ Z+, CRPF ASL ಪ್ರೊಟೆಕ್ಟ್ರಿಂದ ಭದ್ರತೆ ಒದಗಿಸಲಾಗಿದೆ. ವಿವಿಧ 8 ರಾಜ್ಯದ ಮುಖ್ಯಮಂತ್ರಿಗಳಿಗೆ Z+ ಮತ್ತು Z ಕ್ಯಾಟಗರಿ ಭದ್ರತೆ ನೀಡಲಾಗುತ್ತಿದೆ. ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಒದಗಿಸಲಾಗಿದೆ.
ಹೆಚ್ಚುವರಿ ಪೋಲಿಸರ ನಿಯೋಜನೆ
ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಸೇರಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಒದಲಾಗಿಸಲಾಗಿದ್ದು, ಎಂಟು ಮಂದಿ ಡಿಸಿಪಿ, 10 ಮಂದಿ ಎಸಿಪಿ, 28 ಇನ್ಸ್ಪೆಕ್ಟರ್ಗಳು, 1,500ಕ್ಕೂ ಹೆಚ್ಚು ಪೊಲೀಸರು ಮತ್ತು ಸಂಚಾರ ನಿರ್ವಹಣೆಗಾಗಿ 500 ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ವಿವಿಐಪಿ ಎಂಟ್ರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಿರುವ ಪೊಲೀಸರು, 2 ಗೇಟ್ಗಳಲ್ಲಿ ವಿವಿಐಪಿ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ತಯಾರಿ ನಡೆದಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಒಂದು ಲಕ್ಷಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ.
ಪ್ರಮಾಣ ವಚನಕ್ಕೆ ಗಣ್ಯರ ದಂಡು
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿಮಾಚಲಪ್ರದೇಶ ಸಿಎಂ ಸುಖ್ ವಿಂದರ್ ಸಿಂಗ್ ಸುಖು, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪುದುಚೆರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಮತ್ತು NCP ಮುಖ್ಯಸ್ಥ ಶರದ್ ಪವಾರ್ ಆಗಮಿಸುತ್ತಿದ್ದಾರೆ.