ಗೆಲುವಿಗೆ ನೂರಾರು ಅಪ್ಪಂದಿರು.. ಸೋಲು ಅನಾಥ ಎಂಬ ಮಾತಿದೆ. ಈ ಮಾತನ್ನು ಜೆಡಿಎಸ್ ಪಕ್ಷಕ್ಕೆ ಅನ್ವಯಿಸಬಹುದೇ? ಸದ್ಯದ ರಾಜಕೀಯ ಸ್ಥಿತಿಗತಿ ಹಾಗೂ ‘ತೆನೆ’ ಪಕ್ಷದ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಾಗ ಹಲವು ಆಯಾಮಗಳಲ್ಲಿ ಪ್ರಶ್ನೆಗಳು ಎದುರಾಗುತ್ತವೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ವರ್ಷ ಮುನ್ನವೇ ಹಲವು ಯಾತ್ರೆಗಳನ್ನು ಸಂಘಟಿಸಿ ಹುರುಪಿನಿಂದ ಮುನ್ನುಗ್ಗಿದ್ದ ಜೆಡಿಎಸ್ಗೆ ಚುನಾವಣಾ ಫಲಿತಾಂಶ ಮರ್ಮಾಘಾತವನ್ನೇ ನೀಡಿದೆ. ಹಳೇ ಮೈಸೂರಿನ ಜೆಡಿಎಸ್ ಕೋಟೆ ‘ಕೈ’ ವಶ, ಮುಸ್ಲಿಂ ವೋಟುಗಳನ್ನು ಕಳೆದುಕೊಂಡಿದ್ದು, ನಿಖಿಲ್, ಸಾರಾ ಮಹೇಶ್ರಂಥಾ ನಾಯಕರ ಸೋಲು.. ಹೀಗೆ ಹಲವು ಕಾರಣಗಳು ಪಕ್ಷದ ನೈತಿಕ ಸ್ಥೈರ್ಯ ಉಡುಗಿಸುವಂತೆ ಮಾಡಿಬಿಟ್ಟಿವೆ. ಆದ್ರೆ, ಕಾರ್ಮೋಡದಂಚಿನ ಬೆಳ್ಳಿ ರೇಖೆ ಎಂಬಂತೆ ಜೆಡಿಎಸ್ ಪಾಲಿಗೆ ಹಲವು ಆಶಾಕಿರಣಗಳೂ ಇವೆ. ಸ್ವರೂಪ್, ಶರಣ ಗೌಡ, ಹರೀಶ್ ಗೌಡರಂಥಾ ಯುವ ಉತ್ಸಾಹಿಗಳ ಗೆಲುವು ಪಕ್ಷಕ್ಕೆ ಹೊಸ ಭರವಸೆ ಮೂಡಿಸಿದೆ. ಇವೆಲ್ಲದರ ನಡುವೆ, ಮುಂದಿನ 6 ತಿಂಗಳಲ್ಲಿ ರಾಜಕೀಯ ಚಿತ್ರಣ ಬದಲಾಗಬಹುದು ಅನ್ನೋ ಎಚ್ಡಿಕೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ!
ಆಶಾವಾದದ ವಿಚಾರಕ್ಕೆ ಬಂದರೆ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮೀರಿಸುವವರೇ ಇಲ್ಲ. ರಾಜ್ಯ ರಾಜಕಾರಣದ ಪ್ರತಿಯೊಂದು ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ಗಮನಿಸುವ ಎಚ್ಡಿಕೆ, ಈಗ ಹೊಸದೊಂದು ಭವಿಷ್ಯ ವಾಣಿ ನುಡಿದಿದ್ದಾರೆ! ನವೆಂಬರ್ವರೆಗೆ ಕಾದು ನೋಡಿ, ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದಿದ್ದಾರೆ.
ಕುಮಾರಸ್ವಾಮಿ ಅವರ ಈ ಮಾತುಗಳ ಹಿಂದೆ ಸೂಕ್ತ ರಾಜಕೀಯ ವಿಶ್ಲೇಷಣೆಗಳೂ ಇವೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ – ಡಿಕೆಶಿ ನಡುವೆ ದೋಸ್ತಿಯೋ? ಕುಸ್ತಿಯೋ? ಎಂಬ ಸಂದೇಹವೂ ಇದೆ. ಒಂದು ವೇಳೆ ಇಬ್ಬರೂ ಕೈ ನಾಯಕರ ನಡುವೆ ದೋಸ್ತಿ ಬದಲು ಕುಸ್ತಿ ಶುರುವಾದರೆ ಅದರ ಲಾಭ ಪಡೆಯಲು ಜೆಡಿಎಸ್ ಯತ್ನಿಸಬಹುದು. ಇನ್ನು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಎಡವಿದರೆ, ಕೊಟ್ಟ ಮಾತು ತಪ್ಪಿದರೆ ಅದರ ರಾಜಕೀಯ ಪ್ರಯೋಜನ ಪಡೆಯಲು ಜೆಡಿಎಸ್ ಮಾತ್ರವಲ್ಲ, ಬಿಜೆಪಿ ಕೂಡಾ ಸಿದ್ಧವಾಗಿ ನಿಂತಿದೆ. ಇವೆಲ್ಲದರ ಪರಿಣಾಮ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಆಗೋದು ನಿಶ್ಚಿತ. 2024ರ ಲೋಕಸಭಾ ಚುನಾವಣೆಗೆ ಇನ್ನೂ 1 ವರ್ಷ ಬಾಕಿ ಇದೆ. ಅಷ್ಟರೊಳಗೆ ಕಾಂಗ್ರೆಸ್ನ ಬಂಡವಾಳ ಬಯಲಾಗಬಹುದು ಅನ್ನೋದು ವಿಪಕ್ಷಗಳ ನಿರೀಕ್ಷೆ. ‘ಗ್ಯಾರಂಟಿಗಳ ಜಾರಿಗೆ ವರ್ಷಕ್ಕೆ 60 ರಿಂದ 70 ಸಾವಿರ ಕೋಟಿ ರೂಪಾಯಿ ಎಲ್ಲಿಂದ ತರ್ತಾರೆ’ ಎಂಬ ಕುಮಾರಸ್ವಾಮಿ ಪ್ರಶ್ನೆಯ ಹಿಂದೆ ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳೂ ಅಡಗಿವೆ!
91ನೇ ವರ್ಷಕ್ಕೆ ಕಾಲಿಟ್ಟಿರುವ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರಿಗೆ ಪಕ್ಷದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇವಲ 19 ಸ್ಥಾನಗಳಿಗೆ ಕುಸಿದಿರುವ ಜೆಡಿಎಸ್ ಪಕ್ಷವನ್ನು ಮತ್ತೆ ಮೇಲೆತ್ತಲು ನಾನೇ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಜೆಡಿಎಸ್ನ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲೇ ಪಕ್ಷಕ್ಕಾದ ಹಿನ್ನೆಡೆ, ಮುಸ್ಲಿಮರ ಮತಗಳು ಕೈ ಕೊಟ್ಟಿದ್ದು, ನಿಖಿಲ್ ಕುಮಾರಸ್ವಾಮಿ ಸೋಲು ದೇವೇಗೌಡರಿಗೆ ಬೇಸರ ತರಿಸಿದೆ. ತಮ್ಮ ಅನಾರೋಗ್ಯದ ನಡುವಲ್ಲೂ ಪಕ್ಷ ಸಂಘಟನೆಗೆ ಮುಂದಾಗಿರುವ ದೇವೇಗೌಡರು, ಮುಂಬರುವ ಪಂಚಾಯತ್ ಚುನಾಔಣೆ, ಲೋಕಸಭಾ ಚುನಾವಣೆಗಳಿಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಖುದ್ದು ದೇವೇಗೌಡರೇ ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಮಾಹಿತಿಯನ್ನ ಎಚ್. ಡಿ. ರೇವಣ್ಣ ರವಾನಿಸಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷ ಭವಿಷ್ಯದ ಚುನಾವಣಾ ಹೋರಾಟಗಳಿಗೆ ಸನ್ನದ್ಧವಾಗಲು ಮುಂದಾಗಿದೆ.
ಜೆಡಿಎಸ್ ಪಕ್ಷಕ್ಕೆ ಮುಂದಿನ ಹೋರಾಟ 2024ರ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿ ದಿಗ್ವಿಜಯ ಸಾಧಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ವಿರೋಧ ಪಕ್ಷಗಳ ರಾಜಕೀಯ ಸಮೀಕರಣಗಳು ಯಾವುದೇ ಪ್ರಯೋಜನಕ್ಕೆ ಬಾರದು. ಸದ್ಯದ ಮಟ್ಟಿಗೆ ಬಿಜೆಪಿಗೆ ಹಾಗೂ ಪ್ರಧಾನಿ ಮೋದಿ ವರ್ಚಸ್ಸಿಗೆ ಧಕ್ಕೆಯಾಗುವಂಥ ದೊಡ್ಡ ಮಟ್ಟದ ಬೆಳವಣಿಗೆಗಳು ಯಾವುದೂ ನಡೆದಿಲ್ಲ. ಲೋಕಸಭಾ ಚುನಾವಣೆಗೆ ಒಂದು ವರ್ಷ ಇರುವ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನೂ ಈಗಲೇ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ಆದರೆ, ಅತಂತ್ರ ಸ್ಥಿತಿ ಎದುರಾಗಿ ವಿಪಕ್ಷಗಳು ಸರ್ಕಾರ ರಚಿಸಬೇಕಾದ ಸನ್ನಿವೇಶ ಎದುರಾದರೆ ಜೆಡಿಎಸ್ ಕೂಡಾ ಅಧಿಕಾರದ ಸವಿ ಕಾಣುವ ನಿಟ್ಟಿನಲ್ಲಿ ದೋಸ್ತಿ ಪಕ್ಷವಾಗಲು ಯತ್ನಿಸಬಹುದು. ಇದರ ಹೊರತಾಗಿ ನಿರೀಕ್ಷೆಯಂತೆಯೇ ಬಿಜೆಪಿಗೇ ಮತ್ತೆ ಬಹುಮತ ಬಂದರೆ ಜೆಡಿಎಸ್ಗೆ ಯಾವ ಅವಕಾಶವೂ ಇರಲ್ಲ. ಹೀಗಾಗಿ, ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುವ ಅವಕಾಶ ಸಿಗಲಿ ಅಥವಾ ಸಿಗದೇ ಇರಲಿ, ಆದಷ್ಟೂ ಹೆಚ್ಚಿನ ಸಂಖ್ಯೆಯ ಸಂಸದರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯಂತೂ ಜೆಡಿಎಸ್ಗೆ ಇದೆ. ಇದಕ್ಕಾಗಿ ಈಗಿನಿಂದಲೇ ಪಕ್ಷ ಸಂಘಟನೆ ಮಾಡಬೇಕಾದ ಅನಿವಾರ್ಯತೆ ಇದೆ. ಖುದ್ದು ದೇವೇಗೌಡರೇ ಹಾಸನದಿಂದ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾದ್ರೆ ಪ್ರಜ್ವಲ್ ನಿಲ್ಲೋದಿಲ್ಲ ಎಂದು ಭವಾನಿ ರೇವಣ್ಣ ಈಗಾಗಲೇ ಘೋಷಣೆಯನ್ನೂ ಮಾಡಿದ್ದಾರೆ. ಒಟ್ಟಿನಲ್ಲಿ ಮುಂಬರುವ ಚುನಾವಣಾ ಸವಾಲುಗಳಿಗೆ ಜೆಡಿಎಸ್ ಆಮೂಲಾಗ್ರ ಸಿದ್ದತೆಗೆ ಮುಂದಾಗಿದೆ.