ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವಂತ 5 ಭರವಸೆ ಗ್ಯಾರಂಟಿಗಳನ್ನು ಇಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲೇ ಜಾರಿಗೊಳಿಸುವುದಾಗಿ ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದರು.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Chief Minister Siddaramaiah) ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar) ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ (Deputy Chief Minister), 8 ಮಂದಿ ಶಾಸಕರು ಸಚಿವರಾಗಿ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂದು ಮಧ್ಯಾಹ್ನ 12.30 ಕ್ಕೆ ರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ 8 ಮಂದಿ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಜಯ, 7 ಕೋಟಿ ಕನ್ನಡಿಗರಿಗೆ ಸಿಕ್ಕ ಜಯ, ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರ ಮಾಡಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜನರು ಬದಲಾವಣೆಯನ್ನು ಬಯಿಸಿದ್ದಾರೆ. ಜನರಿಗೆ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಂದೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟು ಆದೇಶ ಹೊರಡಿಸಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಹೊಸ ಸರ್ಕಾರ ಕೊಡುವ ವಾಗ್ದಾನವನ್ನು ಈಡೇರಿಸುತ್ತೇವೆ. ಹಿಂದೆಯು ನುಡಿದಂತೆ ನಡೆದಿದ್ದೇವೆ. ಮುಂದೆಯೂ ನುಡಿದಂತೆ ನಡೆಯುತ್ತೇವೆ ಎಂದರು.
ವಿಶೇಷವಾಗಿ ಕನ್ನಡದ ಎಲ್ಲ ಜನರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ನಾವು ಜನರ ನಿರೀಕ್ಷಿಗೆ ತಕ್ಕಂತೆ ಆಡಳಿತ ನೀಡುತ್ತೇವೆ. ಜನರಿಗೆ ನೀಡಿರುವಂತ ಭರವಸೆಗಳು, ಗ್ಯಾರಂಟಿಗಳನ್ನು ಇವತ್ತೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಒಪ್ಪಿಗೆ ಕೊಡವ ಮೂಲಕ, ಐದು ಗ್ಯಾರಂಟಿಗಳನ್ನು ಜಾರಿಗೆ ತರುವಂತ ಕೆಲಸ ಮಾಡುತ್ತೇವೆ ಎಂದರು.
ಇದು ಕನ್ನಡ ನಾಡಿನ ಜನರಿಗೆ ನಮ್ಮ ಹೊಸ ಸರ್ಕಾರ ಕೊಡುವಂತ ಭರವಸೆ, ವಾಗ್ಧಾನವಾಗಿದೆ. ಈ ಭರವಸೆಯನ್ನು ಈಡೇರಿಸಿಯೇ ಈಡೇರಿಸುತ್ತೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವಂತ ಇತರೆ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳುತ್ತಾ ನನ್ನ ಮಾತು ಮುಗಿಸುತ್ತೇನೆ ಎಂದರು.