ಬೆಂಗಳೂರು: ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ರಚನೆ ಮೇಲೆ ಇದು ಮೊದಲ ಸುದ್ದಿಗೋಷ್ಠಿ. ನಾನು, ಡಿಕೆ ಶಿವಕುಮಾರ್, 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಬೇರೆ ರಾಜ್ಯಗಳ ಸಿಎಂಗಳು, ವಿಪಕ್ಷ ನಾಯಕರು ಬಂದಿದ್ದರು. ಬಿಜೆಪಿಯೇತರ ಪಕ್ಷಗಳ ಅಧ್ಯಕ್ಷರು ಬಂದು ಶುಭಕೋರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಶುಭ ಕೋರಿದ್ದಾರೆ. ನಾವು ಸಹ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸಿದ್ದೇವೆ ಎಂದರು.
ಕಟ್ಟು ನಿಟ್ಟಾಗಿ ತೆರಿಗೆಯನ್ನು ವಸೂಲಿ ಮಾಡಿ ಗ್ಯಾರಂಟಿ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಇದಕ್ಕೆ ಸುಮಾರು ತಿಂಗಳಿಗೆ 1200 ಕೋಟಿ ರೂ. ಆಗಬಹುದು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 200 ರೂ. ಹಾಕಲಾಗುವುದು. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಈ ವರ್ಷದ ಪದವೀದರ, ಪಿಎಚ್ಡಿ, ಎಂಬಿಬಿಎಸ್ ಪದವೀದರ ನಿರುದ್ಯೋಗಿಗಳಿಗೆ ಎರಡೂವರೆ ವರ್ಷಗಳ ವರೆಗೆ ತಿಂಗಳಿಗೆ ಮೂರು ಸಾವಿರ ರೂ. ನೀಡಲಾಗುವುದು. ಈ ನಡುವೆ ಉದ್ಯೋಗ ಸಿಕ್ಕರೆ ಯುವ ನಿಧಿ ನೀಡಲಾಗುವುದಿಲ್ಲ. ಡಿಪ್ಲಮಾ ಪಾಸ್ ಮಾಡಿದ ನಿರುದ್ಯೋಗಿಗಳಿ ಒಂದೂವರೆ ಸಾವಿರ ರೂ., ಎಲ್ಲಾ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಫ್ರೀ ಪಾಸ್ ನೀಡಲಾಗುವುದು, ಬೇರೆ ರಾಜ್ಯಗಳ ಮಹಿಳೆಯರಿಗೆ ಈ ಭಾಗ್ಯ ಇರುವುದಿಲ್ಲ ಎಂದರು. 5 ಗ್ಯಾರಂಟಿಗಳಿಗೆ ತಾತ್ವಿಕವಾಗಿ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.
ಮುಂದಿನ ಸಚಿವ ಸಂಪುಟ ಸಭೆ ನಂತರ ಪಂಚ ಯೋಜನೆಗಳ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ, ಮಂಗಳವಾರ, ಬುಧವಾರ ವಿಧಾನಸಭೆ ಅಧಿವೇಶನ ಕರೆಯುತ್ತಿದ್ದೇವೆ, ಹೊಸ ಸಭಾಪತಿಯನ್ನು ಆಯ್ಕೆ ಮಾಡಲಾಗುವುದು ಎಂದರು
ನ್ಯಾಯಯುತವಾಗಿ ಕರ್ನಾಟಕಕ್ಕೆ ಸಿಗಬೇಕಿದ್ದ 5495 ಕೋಟಿ ರೂ.ವನ್ನು ಬಿಜೆಪಿ ರಾಜ್ಯ ಸರ್ಕಾರ ಕೇಳಿಲ್ಲ. ರಾಜ್ಯದ ಸಂಸದರು ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ ದೇಶದ ಮೇಲೆ 155 ಲಕ್ಷ ಕೋಟಿ ಆಗಿದೆ. ಬೊಮ್ಮಾಯಿ ಯಡಿಯೂರಪ್ಪ ಸರ್ಕಾರದಲ್ಲಿ 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾನು ಐದು ವರ್ಷಗಳ ಕಾಲ ಸರ್ಕಾರ ನಡೆಸಿದಾಗಲೂ ಇಷ್ಟೊಂದು ಸಾಲ ಮಾಡಿರಲಿಲ್ಲ. ಹೀಗಾಗಿ ನಾವು ಕರ್ನಾಟಕವನ್ನು ಆರ್ಥಿಕ ದಿವಾಳಿಗೆ ಸಿಲುಕಿಸದೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.
ನಮ್ಮ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂ. ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ ಎಂದರು.
ಕಾಂಗ್ರೆಸ್ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.