ಬೆಂಗಳೂರು: ನಮ್ಮ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂ. ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ ಎಂದರು.ನ್ಯಾಯಯುತವಾಗಿ ಕರ್ನಾಟಕಕ್ಕೆ ಸಿಗಬೇಕಿದ್ದ 5495 ಕೋಟಿ ರೂ.ವನ್ನು ಬಿಜೆಪಿ ರಾಜ್ಯ ಸರ್ಕಾರ ಕೇಳಿಲ್ಲ. ರಾಜ್ಯದ ಸಂಸದರು ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ ದೇಶದ ಮೇಲೆ 155 ಲಕ್ಷ ಕೋಟಿ ಆಗಿದೆ. ಬೊಮ್ಮಾಯಿ ಯಡಿಯೂರಪ್ಪ ಸರ್ಕಾರದಲ್ಲಿ 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾನು ಐದು ವರ್ಷಗಳ ಕಾಲ ಸರ್ಕಾರ ನಡೆಸಿದಾಗಲೂ ಇಷ್ಟೊಂದು ಸಾಲ ಮಾಡಿರಲಿಲ್ಲ. ಹೀಗಾಗಿ ನಾವು ಕರ್ನಾಟಕವನ್ನು ಆರ್ಥಿಕ ದಿವಾಳಿಗೆ ಸಿಲುಕಿಸದೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.
ಕಟ್ಟು ನಿಟ್ಟಾಗಿ ತೆರಿಗೆಯನ್ನು ವಸೂಲಿ ಮಾಡಿ ಗ್ಯಾರಂಟಿ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಇದಕ್ಕೆ ಸುಮಾರು ತಿಂಗಳಿಗೆ 1200 ಕೋಟಿ ರೂ. ಆಗಬಹುದು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 200 ರೂ. ಹಾಕಲಾಗುವುದು.
ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಈ ವರ್ಷದ ಪದವೀದರ, ಪಿಎಚ್ಡಿ, ಎಂಬಿಬಿಎಸ್ ಪದವೀದರ ನಿರುದ್ಯೋಗಿಗಳಿಗೆ ಎರಡೂವರೆ ವರ್ಷಗಳ ವರೆಗೆ ತಿಂಗಳಿಗೆ ಮೂರು ಸಾವಿರ ರೂ. ನೀಡಲಾಗುವುದು. ಈ ನಡುವೆ ಉದ್ಯೋಗ ಸಿಕ್ಕರೆ ಯುವ ನಿಧಿ ನೀಡಲಾಗುವುದಿಲ್ಲ. ಡಿಪ್ಲಮಾ ಪಾಸ್ ಮಾಡಿದ ನಿರುದ್ಯೋಗಿಗಳಿ ಒಂದೂವರೆ ಸಾವಿರ ರೂ., ಎಲ್ಲಾ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಫ್ರೀ ಪಾಸ್ ನೀಡಲಾಗುವುದು, ಬೇರೆ ರಾಜ್ಯಗಳ ಮಹಿಳೆಯರಿಗೆ ಈ ಭಾಗ್ಯ ಇರುವುದಿಲ್ಲ ಎಂದರು. 5 ಗ್ಯಾರಂಟಿಗಳಿಗೆ ತಾತ್ವಿಕವಾಗಿ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.